ರಾಜಮಂಡ್ರಿ: ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಸೊಸೆಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮಲ್ಕಿಪುರಂ ಮಂಡಲದ ಮೆಡಿಚೆರ್ಲಾ ಪಾಳ್ಯಂನಲ್ಲಿ ನಡೆದಿದೆ.
ಮೃತ ಸೊಸೆಯನ್ನು ಪ್ರಿಯಾಮಣಿ (25) ಎಂದು ಹಾಗೂ ಆರೋಪಿ ಮಾವನನ್ನು ಸತ್ಯನಾರಾಯಣ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಪ್ರಿಯಾಮಣಿ, ಸತ್ಯನಾರಾಯಣ ಮಗ ವಿಜಯ್ ಕುಮಾರ್ನನ್ನು ಮದುವೆ ಆಗಿದ್ದಳು. ವಿಜಯ್ ಕತಾರ್ನಲ್ಲಿ ಕೆಲಸ ಮಾಡುತ್ತಿದ್ದಾನೆ.
ಪ್ರಿಯಾಮಣಿಯ ಪಾಲಕರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನೆಲೆಸಿದ್ದಾರೆ. ಪ್ರಿಯಾಮಣಿ ಮತ್ತೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಕ್ಕೆ ಸತ್ಯನಾರಾಯಣ ಹಾಗೂ ಪ್ರಿಯಾಮಣಿ ಕುಟುಂಬದ ನಡುವೆ ಅನೇಕ ದಿನಗಳಿಂದಲೂ ಘರ್ಷಣೆ ಉಂಟಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 22ರಂದು ಸತ್ಯನಾರಾಯಣ ಸೊಸೆ ಪ್ರಿಯಾಮಣಿ ವಿರುದ್ಧ ದೂರು ನೀಡಿದ್ದ. ಬೇರೊಬ್ಬ ಯುವಕನೊಂದಿಗೆ ಆಕೆ ಓಡಿ ಹೋಗಿದ್ದಾಳೆ ಎಂದು ಆರೋಪಿಸಿದ್ದರು. ಪೊಲೀಸ್ ಮಧ್ಯಸ್ತಿಕೆಯಿಂದಾಗಿ ಪ್ರಿಯಾಮಣಿ ಮನೆಗೆ ಹಿಂತಿರುಗಿದ್ದಳು. ಸಂಧಾನ ಮಾಡಿ ಮನೆಗೆ ಕಳುಹಿಸಲಾಗಿತ್ತು.
ಎಲ್ಲವೂ ಸರಿಹೋಯಿತು ಅಂದುಕೊಳ್ಳುವಷ್ಟರಲ್ಲಿ ಶುಕ್ರವಾರ ರಾತ್ರಿ ಪ್ರಿಯಾಮಣಿ ಮತ್ತು ಸತ್ಯನಾರಾಯಣನ ನಡುವೆ ಜಗಳ ನಡೆದಿದೆ. ಗಲಾಟೆ ತಾರಕಕ್ಕೇರಿ ತಾಳ್ಮೆ ಕಳೆದುಕೊಂಡ ಸತ್ಯನಾರಾಯಣ ಅಂಡಮಾನ್ನಿಂದ ಬಂದಿದ್ದ ಪ್ರಿಯಾಮಣಿ ತಾಯಿಯ ಮುಂದೆಯೇ ಆಕೆಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸದ್ಯ ಸತ್ಯನಾರಾಯಣನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.