Breaking News

ತಂದೆಯ ಸಾವಿನ ದಿನವೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಶಬಾನಾಗೆ ಜಿಲ್ಲಾಡಳಿತದಿಂದ ಶಹಭಾಷ್​ಗಿರಿ

Spread the love

ಧಾರವಾಡ: ಮಿಷನ್ ವಿದ್ಯಾಕಾಶಿ ಯೋಜನೆಯ ಯಶಸ್ವಿಗೆ ಶ್ರಮಿಸುತ್ತಿರುವ ಜಿಲ್ಲಾಡಳಿತಕ್ಕೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಸಾಥ್ ನೀಡುತ್ತಿದ್ದಾರೆ. ಇದಕ್ಕೆ ಪ್ರೇರಣೆ ಎನ್ನುವಂತೆ ತಂದೆ ತೀರಿಸಿಕೊಂಡ ನೋವಿನ ಮಧ್ಯೆಯೂ ಪರೀಕ್ಷೆ ಬರೆದು ಬಂದು ವಿದ್ಯಾರ್ಥಿನಿ ನವಲಗುಂದ ವಿದ್ಯಾರ್ಥಿನಿಯೊಬ್ಬಳ ನಡೆಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಜಿಲ್ಲಾಡಳಿತವೇ ಆ ವಿದ್ಯಾರ್ಥಿನಿಯ ಮನೆಗೆ ತೆರಳಿ ಸಾಂತ್ವನದೊಂದಿಗೆ ಆಸರೆಯ ಭರವಸೆ ನೀಡಿದೆ.

ಮಾ.21ರ ಮೊದಲ ದಿನದ ಎಸ್​ಎಸ್​ಎಲ್​ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ 4 ಗಂಟೆಗೂ ಮುನ್ನ ನವಲಗುಂದದ ಶಬಾನಾ ಅವರ ತಂದೆ ನೂರಹುಸೇನ್ ಮೃತಪಟ್ಟಿದ್ದರು. ತಂದೆಯ ಮರಣದಿಂದ ಧೃತಿಗೆಡದ ಪುತ್ರಿ ಶಬಾನಾ ಪರೀಕ್ಷೆ ಬರೆದು ಬಂದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಳು. ಇದು ಮೆಚ್ಚುಗೆಗೆ ಕಾರಣವಾಗಿತ್ತು.

ಸಾವಿನ ನೋವಿನ ಮಧ್ಯೆಯೂ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು, ಧೈರ್ಯ ತೋರಿದ ಶಬಾನಾ ಇತರೆ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದು, ಈ ವಿದ್ಯಾರ್ಥಿನಿಯ ನಡೆ ಮೆಚ್ಚಿ, ಧೈರ್ಯ ತುಂಬಿ ಅವಳ ಓದಿಗೆ ನೆರವು, ಸಹಕಾರ ನೀಡಲು ಸ್ವತಃ ಜಿಲ್ಲಾಧಿಕಾರಿ ದಿವ್ಯ ಪ್ರಭು, ಶಾಸಕ ಎನ್ ಹೆಚ್​ ಕೋನರಡ್ಡಿ ಹಾಗೂ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ಶಾಬಾನಾ ಮನೆಗೆ ಭೇಟಿ ನೀಡಿ, ಶಬಾನಾ ಹಾಗೂ ಅವಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಶಾಸಕ ಎನ್ ಹೆಚ್​ ಕೋನರಡ್ಡಿ ಅವರು ಮುಂದಿನ ಮೂರು ತಿಂಗಳಲ್ಲಿ ಆಶ್ರಯ ಮನೆ ಕಟ್ಟಿಸಿಕೊಡುವ ಭರವಸೆ ನೀಡಿ, ಅಲ್ಲಿಯವರೆಗೆ ಶಬಾನಾ ಅವರಿಗೆ ಮನೆ ಬಾಡಿಗೆ ಮೊತ್ತವನ್ನು ಸ್ಥಳದಲ್ಲಿಯೇ ಸ್ವಂತ ಹಣ ನೀಡಿದರು.

ಅತಂತ್ರವಾದ ಶಬಾನಾ ಕುಟುಂಬಕ್ಕೆ ಭರವಸೆ ಮೂಡಿಸಿದ ಜಿಲ್ಲಾಡಳಿತ: ನವಲಗುಂದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಶಬಾನಾಳು ಮೃತ ನೂರಹುಸೇನ್​ ಹಾಗೂ ಜನ್ನತಬಿ ದಂಪತಿಯ ಮೊದಲ ಮಗಳು. ಹಳ್ಳಿಗಳಲ್ಲಿ ದ್ವಿಚಕ್ರ ವಾಹನದ ಮೇಲೆ ತಿರುಗಾಡಿ ರಗ್ಗು, ಹಾಸಿಗೆ ಹೊದಿಕೆ, ದಿಂಬು ಮಾರಾಟ ಮಾಡುತ್ತಿದ್ದ ತಂದೆಯ ದುಡಿಮೆಯೇ ಈ ಕುಟುಂಬಕ್ಕೆ ಆಸರೆ. ತಾಯಿ ಜನ್ನತಬಿ ಮಾನಸಿಕ ಅಸ್ವಸ್ಥೆ. ಇದಲ್ಲದೆ ಶಬಾನಾಗೆ ಮೂರು ಜನ ಸಹೋದರಿಯರಿದ್ದು, ಕೌಸರ್ 2ನೇ, ಶಬನಮ್ 4ನೇ ಹಾಗೂ ಮಾಶಾಬಿ 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇವರೆಲ್ಲ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದು, ಇವರಿಗೆ ಸ್ವಂತ ಮನೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಬಾನಾ ಕುಟುಂಬ ಅತಂತ್ರವಾಗಿದೆ. ಕಳೆದ ಒಂದು ವಾರದಿಂದ ತಾಯಿಯ ಸಹೋದರ ಅವರನ್ನು ಜೋಪಾನ ಮಾಡುತ್ತಿದ್ದಾನೆ. ಈ ಎಲ್ಲ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಶಬಾನಾ ಕುಟುಂಬಕ್ಕೆ ಸರ್ಕಾರದ ನೆರವು ಹಾಗೂ ಮಾನಸಿಕ ಬೆಂಬಲ, ಧೈರ್ಯ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ