ಇಂದು ನಟ ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಸ್ಮಾರಕದ ಬಳಿ ಇಂದು ಬೆಳಿಗ್ಗೆಯಿಂದಲೇ ಜನಸಾಗರ ಹರಿದುಬಂದಿದೆ. ಇದೇ ಸಂದರ್ಭದಲ್ಲಿ ನಟ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಒಡನಾಟ ಮುನ್ನೆಲೆಗೆ ಬಂದಿದೆ.
ಇಬ್ಬರೂ ನಟರ ನಡುವೆ ಉತ್ತಮ ಒಡನಾಟ ಮೊದಲಿನಿಂದಲೂ ಇತ್ತು. ಆದರೆ, ಕೆಲ ಅಂದಾಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಇಬ್ಬರ ನಡುವೆ ಕಿಡಿ ಹೊತ್ತಿಸಿ, ಬೆಂಕಿ ಕಾಯಿಸಿಕೊಂಡಿದ್ದರು.
ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅವರು ಬಾಂಧವ್ಯಕ್ಕೆ ಸಾಕ್ಷಿ ಎಂದರೆ ಅರಸು ಸಿನಿಮಾ. 2007ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಸಖತ್ ಹಿಟ್ ಕೂಡ ಆಗಿತ್ತು. ಈ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ನಟಿಸುವ ಮೂಲಕ ಡಬಲ್ ಧಮಾಕಾ ನೀಡಿದ್ದರು.
ಈ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಪುನೀತ್ ರಾಜ್‌ಕುಮಾರ್ ತನ್ನಿಬ್ಬರು ಪ್ರೇಯಸಿಯರಿಗೆ ಒಳ್ಳೆಯ ಹುಡುಗರನ್ನು ಹುಡುಕಿಕೊಡಲು ನಿರ್ಧರಿಸುತ್ತಾರೆ. ಅದರಂತೆ ಆ ಪಾತ್ರಗಳಿಗೆ ಸೂಕ್ತ ನಾಯಕರನ್ನು ಹುಡುಕಬೇಕು ಎಂದು ಪುನೀತ್ ನಿರ್ಧರಿಸಿದ್ದರು. ತಕ್ಷಣವೇ ಆ ಪಾತ್ರವನ್ನು ದರ್ಶನ್ ಮಾಡಿದರೆ ಒಳ್ಳೆಯದು ಎಂದು ಫಿಕ್ಸ್ ಆಗುತ್ತಾರೆ ಪುನೀತ್.
ಮತ್ತೊಂದು ಪಾತ್ರಕ್ಕೆ ಆದಿತ್ಯ ಅವರನ್ನು ಆಯ್ಕೆ ಮಾಡಲಾಗುತ್ತೆ. ಇನ್ನು ದರ್ಶನ್ ಕೂಡ ಆ ಹೊತ್ತಿಗೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದ ಸ್ಟಾರ್ ಆಗಿದ್ದರು. ಹಾಗಾಗಿ ಅವರನ್ನು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಸುವುದು ಸ್ವಲ್ಪ ಕಷ್ಟವೇ ಎಂದುಕೊಂಡಿದ್ದರು. ಆದರೆ ಕಥೆ ನಡೆದಿದ್ದೇ ಬೇರೆ.
ಅರಸು ಸಿನಿಮಾದಲ್ಲಿ ಒಂದು ಪಾತ್ರ ಮಾಡ್ತೀರಾ? ಎಂದು ಕೇಳಿದ ಕೂಡಲೇ ದರ್ಶನ್ ಅವರು ಒಂದೂ ಮಾತನಾಡದೆ, ಶೂಟಿಂಗ್ ಯಾವಾಗ ಬರಬೇಕು? ಎಂದು ಕೇಳಿದ್ದರಂತೆ. ಈ ಸಿನಿಮಾದಲ್ಲಿ ನಟಿಸಲು ಎರಡು ಕಂಡೀಷನ್ ಕೂಡ ದರ್ಶನ್ ಹಾಕಿದ್ದರಂತೆ. ಅದೇನಂದರೆ, ನನಗೆ ಕಥೆ ಏನೆಂದು ನೀವು ಹೇಳಬಾರದು, ಇದಕ್ಕೆ ಸಂಭಾವನೆಯಂತೂ ಕೊಡಲೇಬಾರದು ಎಂದಿದ್ದರು ದರ್ಶನ್.
ಬಳಿಕ ದರ್ಶನ್ ಅವರು ಅರಸು ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಧೂಳೆಬ್ಬಿಸಿದ್ದರು. ಸಿನಿಮಾ ಕೂಡ ಭರ್ಜರಿ ಪ್ರದರ್ಶನ ಕಂಡಿತು. ಈ ಸಕ್ಸಸ್ ನಂತರ ದರ್ಶನ್ ಅವರಿಗೆ ಪ್ರತಿಯಾಗಿ ಏನಾದರೂ ಮಾಡಲೇಬೇಕು ಎಂದು ಪುನೀತ್ ಅವರು ಅಂದುಕೊಂಡಿದ್ದರಂತೆ.
ಕೊನೆಗೆ ದರ್ಶನ್ ಅವರಿಗೆ ಒಂದು ದುಬಾರಿ ವಾಚ್ ಅನ್ನು ಪುನೀತ್ ಅವರು ಗಿಫ್ಟ್ ಆಗಿ ನೀಡಲು ಮುಂದಾಗಿದ್ದರು. ಇದನ್ನು ಕೂಡ ದರ್ಶನ್ ನಿರಾಕರಿಸಿದ್ದರು. ನಾನು ಮೊದಲೇ ಹೇಳಿದ್ದೆ, ನನಗೆ ಯಾವುದೇ ಸಂಭಾವನೆ ಬೇಡ ಎಂದು ದರ್ಶನ್ ಹೇಳಿ ಜಾರಿಕೊಳ್ಳಲು ಯತ್ನಿಸಿದ್ದರು.
ಆದರೆ, ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರು ಇದನ್ನು ಸಂಭಾವನೆ ಎಂದು ಅನ್ಕೋಬೇಡಿ. ಇದನ್ನು ನಾವು ಪ್ರೀತಿಯಿಂದ ನಿಮಗೆ ಕೊಡುತ್ತಿರುವುದು ಎಂದಿದ್ದರು. ಬಳಿಕ ದರ್ಶನ್ ಆ ಉಡುಗೊರೆಯನ್ನು ಸ್ವೀಕರಿಸಿದ್ದರು. ಈ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಅವರು ಹಲವು ಸಂದರ್ಶನಗಲ್ಲಿ ಹೇಳಿದ್ದಾರೆ.
Laxmi News 24×7