ಬೆಳಗಾವಿ: ಕೃಷಿ ರಂಗದಲ್ಲಿ ಸದಾ ಪ್ರಯೋಗಶೀಲರಾದ ನಿಪ್ಪಾಣಿ ತಾಲ್ಲೂಕಿನ ಸೌಂದಲಗಾ ಗ್ರಾಮದ ರೈತ ಸಂಜಯ ಶಿಂತ್ರೆ ಅವರ ಹೊಲಕ್ಕೆ ಕಾಲಿಟ್ಟರೆ ಸಾಕು; ಹತ್ತಾರು ಬಗೆಯ ಬೆಳೆಗಳ ದರ್ಶನವಾಗುತ್ತದೆ. ಕಬ್ಬು, ಹೂವು, ಹಣ್ಣು, ಎಲೆಗಳು, ಈರುಳ್ಳಿ ಹೀಗೆ… ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತ, ಸಮಗ್ರ ಕೃಷಿಯಲ್ಲಿ ಅವರು ಖುಷಿ ಕಾಣುತ್ತಿದ್ದಾರೆ.
ಜತೆಗೆ, ತಾಳೆ ಕೃಷಿಯೂ ಉತ್ತಮ ಆದಾಯ ನೀಡುತ್ತಿದೆ.
‘ನಾನು 18 ಎಕರೆ ಜಮೀನು ಹೊಂದಿದ್ದೇನೆ. ಯಾವುದೇ ಬೆಳೆ ಬೆಳೆಯುವ ಮುನ್ನ, ಮಾರುಕಟ್ಟೆಗೆ ಹೋಗಿ ಅಭ್ಯಸಿಸುತ್ತೇನೆ. ಬರುವ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಯಾವ ಬೆಳೆ ಕೊರತೆ ಉಂಟಾಗಬಹುದು? ಯಾವುದಕ್ಕೆ ಉತ್ತಮ ಹೆಚ್ಚಿನ ಧಾರಣೆ ಸಿಗಬಹುದು ಎಂಬ ಅಂದಾಜಿನ ನಂತರವೇ, ನಾಟಿ ಮಾಡುತ್ತೇನೆ. ಕೆಲವೊಮ್ಮೆ ಲೆಕ್ಕಾಚಾರ ತಪ್ಪಿರಬಹುದು. ಆದರೆ, ಹೆಚ್ಚಿನ ಬಾರಿ ಅಂದುಕೊಂಡಂತೆ ದರ ಸಿಕ್ಕಿದೆ’ ಎನ್ನುತ್ತಾರೆ ಸಂಜಯ ಶಿಂತ್ರೆ.
‘4 ಎಕರೆಯಲ್ಲಿ ಕೇಶರ, ಆಪೂಸ್, ಲೊಂಚೆ ಮತ್ತಿತರ ತಳಿಗಳ 300 ಮಾವಿನ ಮರ ಬೆಳೆಸಿದ್ದೇನೆ. 2 ಎಕರೆಯಲ್ಲಿ ತಾಳೆ ಕೃಷಿ ಮಾಡಿದ್ದೇನೆ. ಪುಷ್ಪಗುಚ್ಛದಲ್ಲಿ ಹೂವುಗಳ ಹಿಂಬದಿ ಬಳಸುವ ಪಿಲ್ಲರ್ ಮಟೀರಿಯಲ್ಸ್ ಅನ್ನು ಎರಡು ಎಕರೆಯಲ್ಲಿ ಬೆಳೆದಿದ್ದೇನೆ. 30 ಗುಂಟೆಯ ಪಾಲಿಹೌಸ್‌ನಲ್ಲಿ ವೀಳ್ಯದೆಲೆ, ಒಂದು ಎಕರೆಯಲ್ಲಿ ಬಾಳೆ ಬೆಳೆ ಇದೆ. ಐದು ಎಕರೆಯ ಕಬ್ಬಿನ ಬೆಳೆಯಲ್ಲಿ ಅಂತರ್‌ಬೆಳೆಗಳಾಗಿ ಈರುಳ್ಳಿ, ಜೋಳ, ಗೋಧಿ ಬೆಳೆಯುತ್ತಿದ್ದೇನೆ. ಇದರೊಂದಿಗೆ ಚೆಂಡು ಹೂವು, ರೆಡ್‌ಕ್ಯಾಬೇಜ್, ಜೋಳ ಮೊದಲಾದ ಫಸಲು ತೆಗೆಯುತ್ತಿದ್ದೇನೆ. ಚಿಕ್ಕ ನರ್ಸರಿಯಲ್ಲಿ ಈರುಳ್ಳಿ ಬಿತ್ತನೆ ಬೀಜ, ಸಸಿಯನ್ನೂ ಸಿದ್ಧಪಡಿಸಿ ಮಾರುತ್ತೇನೆ’ ಎಂದು ಅವರು ಹೇಳಿದರು.