ಎಷ್ಟು ಟೆನ್ಶನ್ ಇದೆ ಗೊತ್ತಾ? ರಾತ್ರಿಯಲ್ಲಾ ನಿದ್ದೆ ಇಲ್ಲ. ಮೂರು ಗಂಟೆಗೆ ಎದ್ದು ಕೆಲಸ ಮಾಡುತ್ತಿದ್ದೇವೆ. ಆ ಅನುಭವವನ್ನು ಬಾಯ್ಮಾತಿನಲ್ಲಿ ಹೇಳುವುದು ಕಷ್ಟ. ಅದು ಅನುಭವಿಸಿದವರಿಗೇ ಗೊತ್ತು. ಇನ್ನೊಬ್ಬರಿಗೆ ಶಾಪವಾಗಿಯೂ ಕೊಡುವುದಕ್ಕೆ ಸಾಧ್ಯವಿಲ್ಲ …’ ಎಂದು ನಕ್ಕರು ‘ದುನಿಯಾ’ ವಿಜಯ್.
ಎರಡೂವರೆ ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ‘ಸಲಗ’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತು ವಿಜಯ್ಗೆ ಸಹಜವಾಗಿಯೇ ಟೆನ್ಶನ್ ಇದೆ. ಏಕೆಂದರೆ, ಈ ಚಿತ್ರಕ್ಕೆ ಅವರು ನಾಯಕರಷ್ಟೇ ಅಲ್ಲ, ನಿರ್ದೇಶಕರು ಕೂಡಾ. ತಮ್ಮ ಮೊದಲ ನಿರ್ದೇಶನದ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲದಲ್ಲಿರುವ ವಿಜಯ್, ಚಿತ್ರದ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡಿದ್ದಾರೆ. ”ದುನಿಯಾ’ ಸಮಯದಲ್ಲೂ ಇಷ್ಟೇ ಟೆನ್ಶನ್ ಇತ್ತು. ಆಗ ನಾನು ಬರೀ ಹೀರೋ ಆಗಿದ್ದೆ. ಈಗ ನಿರ್ದೇಶಕನಾಗಿದ್ದೇನೆ. ಅಲ್ಲಿ ಒಬ್ಬ ಗೆಲ್ಲಬೇಕಿತ್ತು. ಈಗ ಇಬ್ಬರು ಗೆಲ್ಲಬೇಕಿದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ, ಪ್ರೇಕ್ಷಕರು ಕೈಹಿಡಿಯುತ್ತಾರೆ ಎಂಬ ವಿಶ್ವಾಸವೇನೋ ಇದೆ. ಈ ನಡುವೆ ಒಂದು ಸಿಹಿಯಾದ ಟೆನ್ಶನ್ ಇದೆ. ಸೂರ್ಯ ಹುಟ್ಟುತ್ತಾನೆ ಮತ್ತು ದೊಡ್ಡ ಮಟ್ಟದಲ್ಲಿ ಬೆಳಕು ಚೆಲ್ಲುತ್ತಾನೆ ಎಂಬ ನಂಬಿಕೆ ಇದೆ. ಆ ಸಮಯ ಬರಲಿ ಎಂದು ಕಾಯುತ್ತಾ ಇದ್ದೀನಿ’ ಎನ್ನುತ್ತಾರೆ ವಿಜಯ್.
‘ಸಲಗ’ ರಾಜ್ಯಾದ್ಯಂತ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆಯಂತೆ. ಈ ವಿಷಯದಲ್ಲಿ ತಾನು ಬಹಳ ಲಕ್ಕಿ ಎನ್ನುತ್ತಾರೆ ವಿಜಯ್. ‘ಚಿತ್ರ ಗ್ರಾಂಡ್ ರಿಲೀಸ್ ಆಗಲಿದೆ. ಬಿಡುಗಡೆಯ ಜವಾಬ್ದಾರಿಯನ್ನು ನಿರ್ವಪಕ ಕೆ.ಪಿ. ಶ್ರೀಕಾಂತ್ ಹೊತ್ತಿದ್ದಾರೆ. ಚಿತ್ರವನ್ನು ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ತಲುಪಿಸುವುದಕ್ಕೆ ಅವರು ಮುಂದೆ ನಿಂತಿದ್ದಾರೆ’ ಎನ್ನುತ್ತಾರೆ. ಇನ್ನು, ‘ಸಲಗ’ದ ವಿಶೇಷತೆಯೇನು? ಈ ಬಗ್ಗೆ ಮಾತನಾಡುವ ಅವರು, ‘ಇದು ನಿಮ್ಮ ಮನೆಯ ಕಥೆ. ಹಾಗಾಗಿ ಹುಷಾರಾಗಿರಿ’ ಎನ್ನುತ್ತಾರೆ ವಿಜಯ್.