ಕುಮಟಾ: ಪೊಲೀಸ್ ಇಲಾಖೆಯಲ್ಲಿನ ದಕ್ಷ ಹಾಗೂ ನಿಷ್ಠಾವಂತ ಸೇವೆಗಾಗಿ ನೀಡಲಾಗುವ ಪ್ರತಿಷ್ಠಿತ 2025ನೇ ಸಾಲಿನ ‘ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ’ಕ್ಕೆ ಕುಮಟಾ ತಾಲೂಕಿನ ಕಲಭಾಗ ಗ್ರಾಮದವರಾದ ಹಾಗೂ ಪ್ರಸ್ತುತ ಮುಖ್ಯಮಂತ್ರಿಗಳ ಭದ್ರತಾ ಪಡೆಯ ಸಿಬ್ಬಂದಿಯಾಗಿರುವ ಶ್ರೀ ರಾಮನಾಥ ಎಸ್. ಪಟಗಾರ ಅವರು ಭಾಜನರಾಗಿದ್ದಾರೆ. ಇವರ ಈ ಸಾಧನೆ ಇಡೀ ಉತ್ತರ ಕನ್ನಡ ಜಿಲ್ಲೆಗೆ ಹಾಗೂ ಕುಮಟಾ ತಾಲೂಕಿಗೆ ಹೆಮ್ಮೆಯನ್ನು ತಂದಿದೆ.
ಜುಲೈ 1, 1978ರಲ್ಲಿ ಹಿರಿಯ ಧುರೀಣರಾದ ಶ್ರೀ ಶಿವಪ್ಪ ನಾರಾಯಣ ಪಟಗಾರ ಹಾಗೂ ಶ್ರೀಮತಿ ಮೋಹಿನಿ ಪಟಗಾರ ದಂಪತಿಯ ಪುತ್ರನಾಗಿ ಜನಿಸಿದ ರಾಮನಾಥ್ ಅವರು, ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಕುಮಟಾದಲ್ಲಿಯೇ ಪೂರೈಸಿ, ಧಾರವಾಡದಲ್ಲಿ ಕಾನೂನು ಪದವಿ ಪಡೆದರು. ವಿದ್ಯಾರ್ಥಿ ದೆಸೆಯಲ್ಲಿಯೇ ಎನ್ಸಿಸಿ ಕಮಾಂಡರ್ ಆಗಿ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಇವರು ಅತ್ಯುತ್ತಮ ಸಂಘಟನಾಕಾರರಾಗಿದ್ದರು.
2006ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸೇರಿದ ಇವರು, ಬೆಂಗಳೂರಿನಲ್ಲಿ ಮೂಲ ತರಬೇತಿ ಪಡೆದು ನಂತರ ಹೊರ ರಾಜ್ಯಗಳಲ್ಲಿ ಕಠಿಣ ಕಮಾಂಡೋ ತರಬೇತಿಗಳನ್ನು ಯಶಸ್ವಿಯಾಗಿ ಮುಗಿಸಿ ಸದೃಢ ಪೊಲೀಸ್ ಸಿಬ್ಬಂದಿಯಾಗಿ ಹೊರಹೊಮ್ಮಿದರು. 2010ರಲ್ಲಿ ಪ್ರಾರಂಭವಾದ ಭಯೋತ್ಪಾದನಾ ನಿಗ್ರಹ ದಳದಲ್ಲಿ ಸುಮಾರು 8 ವರ್ಷಗಳ ಕಾಲ ಕಮಾಂಡೋ ಆಗಿ ಹಾಗೂ ತರಬೇತುದಾರರಾಗಿ ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಕೌಶಲ್ಯದ ಮೂಲಕ ರಾಜ್ಯಾದ್ಯಂತ ಅಪಾರ ಶಿಷ್ಯ ವೃಂದವನ್ನು ಇವರು ಸಂಪಾದಿಸಿದ್ದಾರೆ.
ರಾಷ್ಟ್ರೀಯ ಮಟ್ಟದ ಕಮಾಂಡೋ ಸ್ಪರ್ಧೆಯಲ್ಲಿ ಮೂರು ಬಾರಿ ಕರ್ನಾಟಕವನ್ನು ಪ್ರತಿನಿಧಿಸಿರುವ ರಾಮನಾಥ್ ಅವರು, 2009ರಲ್ಲಿ ಮಧ್ಯಪ್ರದೇಶದಲ್ಲಿ ನಡೆದ 2ನೇ ರಾಷ್ಟ್ರೀಯ ಕಮಾಂಡೋ ಸ್ಪರ್ಧೆಯಲ್ಲಿ ರಾಜ್ಯ ತಂಡದ ನಾಯಕರಾಗಿ ಮುನ್ನಡೆಸಿ ಅತ್ಯುತ್ತಮ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದರು. ಅತ್ಯುತ್ತಮ ರೈಫಲ್ ಶೂಟರ್ ಕೂಡ ಆಗಿರುವ ಇವರು, ರಾಜ್ಯಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಎರಡು ಬಾರಿ ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಇವರ ಈ ಅಸಾಧಾರಣ ಸಾಧನೆಗಾಗಿ ಹಿರಿಯ ಅಧಿಕಾರಿಗಳಿಂದ ಹಲವು ಪ್ರಶಂಸನಾ ಪತ್ರಗಳನ್ನು ಪಡೆದಿರುತ್ತಾರೆ.
ಇವರ ಈ ಎಲ್ಲ ಸಾಧನೆ ಮತ್ತು ದಕ್ಷತೆಯನ್ನು ಗುರುತಿಸಿ ಪ್ರಸ್ತುತ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಭದ್ರತಾ ಪಡೆಗೆ ಇವರನ್ನು ಆಯ್ಕೆ ಮಾಡಲಾಗಿದೆ. ಸಿಎಂ ಅವರು ರಾಜ್ಯ ಹಾಗೂ ಹೊರ ರಾಜ್ಯಗಳ ಪ್ರವಾಸ ಕೈಗೊಳ್ಳುವಾಗ ರಾಮನಾಥ್ ಅವರು ಭದ್ರತೆ ನೀಡುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅವರ ಈ ದಕ್ಷ ಕರ್ತವ್ಯ ಹಾಗೂ ನಿಷ್ಠೆಯನ್ನು ಪುರಸ್ಕರಿಸಿ ಇದೀಗ 2025ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಒಲಿದು ಬಂದಿದ್ದು, ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಉನ್ನತ ಹುದ್ದೆಗೇರಿ ಸಾಧನೆ ಮಾಡಲಿ ಎಂದು ತಾಲೂಕಿನ ಜನತೆ ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.
Laxmi News 24×7