ಕೊಪ್ಪಳ: ನಿನ್ನೆ ಸುರಿದ ಭಾರಿ ಮಳೆಗೆ ಬ್ರಿಡ್ಜ್ ಕಂ ಬ್ಯಾರೇಜ್ ತಡೆಗೋಡೆ ನೀರುಪಾಲಾಗಿರುವ ಘಟನೆ ಕೊಪ್ಪಳ ತಾಲೂಕಿನ ಕೋಳೂರು ಬಳಿ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆಯೇ ಬ್ರಿಡ್ಜ್ ಕಂ ಬ್ಯಾರೇಜ್ ತಡೆಗೋಡೆ ಕುಸಿದಿತ್ತು. ಮತ್ತೇ ಈಗ ನಿನ್ನೆ ಸುರಿದ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಈ ಪರಿಣಾಮ ಕೋಳು ಸುತ್ತ ಮುತ್ತ ಇರೋ ಜಮೀನಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಬೆಳೆಗಳು ನಾಶವಾಗಿವೆ.
ಹಲವು ಬಾರಿ ತಡೆಗೋಡೆ ದುರಸ್ಥಿ ಮಾಡಲು ಮನವಿ ಮಾಡಿಕೊಂಡಿದ್ರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.
ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದುವರೆಗೂ ಅಧಿಕಾರಿಗಳು, ಜನ ಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಇನ್ನು ಕೋಳೂರು ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ಕುಸಿತದಿಂದಾಗಿ ಬ್ಯಾರೇಜ್ ಪಕ್ಕದಲ್ಲಿದ್ದ ಭೂಮಿ ಹಂತ ಹಂತವಾಗಿ ಕುಸಿಯುತ್ತಿದೆ. ಬ್ಯಾರೇಜ್ ಪಕ್ಕದಲ್ಲಿದ್ದ ಮರಗಳು ಕೂಡ ನೀರುಪಾಲಾಗಿವೆ.
ಕುಕನೂರಿನಲ್ಲಿ ಮನೆಗಳು, ಅಂಗಡಿಗಳಿಗೆ ನುಗ್ಗಿದ ನೀರು:
ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಭಾರಿ ಮಳೆ ಅವಾಂತರದಿಂದಾಗಿ ಪಟ್ಟಣದ ಹಲವು ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದೆ. ಮಳೆ ಅರ್ಭಟಕ್ಕೆ ಕುಕನೂರ ಜನರ ಕಂಗಾಲಾಗಿದ್ದಾರೆ.