ಕೊಪ್ಪಳ: ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ, ಎಲ್ಲರೂ ಒಂದಾಗಿದ್ದೇವೆ. ಎಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಇಂದು ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟಿಲ್, ಶಾಸಕರು ಸೇರಿ ಒಟ್ಟಾಗಿ ಊಟ ಮಾಡಿದ್ರೆ, ಚಹಾ ಕುಡಿದ್ರೆ ಭಿನ್ನಮತನಾ ಎಂದು ಪ್ರಶ್ನೆ ಮಾಡಿದ್ರು.
ರಾಜ್ಯದಲ್ಲಿ ಇಬ್ಬರು ಸಿಎಂ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಕಟಿಲ್, ಸಿದ್ದರಾಮಯ್ಯ ಗೊಂದಲ ಸೃಷ್ಟಿಮಾಡೋದರಲ್ಲಿ ನಂಬರ್ ಒನ್ ಅಂದರು. ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಿದ್ದಾಗ ಬೇರೆ ಕೈಗಳು ಕೆಲಸ ಮಾಡಿದ್ದಾವೋ ಇಲ್ವೋ ಎಂದು ನನಗೆ ಗೊತ್ತಿಲ್ಲ, ಆದರೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕುಮಾರಸ್ವಾಮಿಯನ್ನ ಕೆಳಗಿಳಿಸುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯಸಭಾ ಸ್ಥಾನಕ್ಕೆ ರಾಜ್ಯದಿಂದ ಹೆಸರು ಕಳಿಸಲಾಗಿದೆ. ಅದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಒಬ್ಬರೇ ಸಿಎಂ ಅವರೇ ಯಡಿಯೂರಪ್ಪ. ಅವರೇ ನಮ್ಮ ಏಕೈಕ ನಾಯಕ ಎಂದು ತಿಳಿಸಿದರು.
ನಮ್ಮ ರಾಜ್ಯದ ಅದ್ಭುತ ಕಲಾವಿದನನ್ನ ನಾವು ಕಳೆದುಕೊಂಡಿದ್ದೇವೆ ಎಂದು ಸರ್ಜಾ ನಿಧನಕ್ಕೆ ನಳಿನ್ ಸಂತಾಪ ವ್ಯಕ್ತಪಡಿಸಿದರು. ಸರ್ಜಾ ಇಡೀ ಕುಟುಂಬ ಚಲನಚಿತ್ರಕ್ಕೆ ಅರ್ಪಿಸಿಕೊಂಡಿದ್ದರು. ಎತ್ತರಕ್ಕೆ ಬೆಳೆಯಬೇಕಾದ ಪ್ರತಿಭೆಯನ್ನ ಕಳೆದುಕೊಂಡಿದ್ದೇವೆ ದುಃಖ ಆಗ್ತಿದೆ. ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ನೀಡಲಿ ಅಂದ್ರು. ಚಿತ್ರರಂಗಕ್ಕೆ ಇದು ದೊಡ್ಡ ಅಘಾತವಾಗಿದೆ. ಸಣ್ಣ ಪ್ರಾಯದಲ್ಲಿ ಸರ್ಜಾರನ್ನು ಕಳೆದುಕೊಂಡಿದ್ದು ಆಘಾತಕಾರಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.