ಬ್ಯಾಂಕಾಕ್, ಫೆ.3- ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೋನ ವೈರಸ್‍ಗೆ ಥೈಲ್ಯಾಂಡ್‍ನಲ್ಲಿ ಔಷಧಿ ಕಂಡು ಹಿಡಿಯಲಾಗಿದೆ.ಬ್ಯಾಂಕಾಕ್‍ನ ವೈದ್ಯರು ಮಾರಕ ಸಾಂಕ್ರಾಮಿಕ ರೋಗಗಳು ಹಾಗೂ ಎಚ್‍ಐವಿಗೆ ನೀಡಲಾಗುವ ಔಷಧಿಗಳನ್ನು ಮಿಶ್ರಣ ಮಾಡಿ ಕೊರೋನ ಸೋಂಕು ಪೀಡಿತ ರೋಗಿಗೆ ಚಿಕಿತ್ಸೆ ನೀಡಿದ್ದು, 48 ಗಂಟೆಯಲ್ಲಿ ವೈರಾಸ್ ನಿರ್ನಾಮವಾಗಿ ರೋಗಿ ಗುಣಮುಖರಾಗಿದ್ದಾರೆ ಎಂದು ಥೈಲ್ಯಾಂಡ್ ಸರ್ಕಾರ ಪ್ರಕಟಿಸಿದೆ.
ಚೀನಾದ 71 ವರ್ಷದ ಮಹಿಳೆಯೊಬ್ಬರು ಥೈಲ್ಯಾಂಡ್‍ನಲ್ಲಿ ಪ್ರವಾಸ ಮಾಡುವಾಗ ಸೋಂಕಿನಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ಮಾರಕ ಸಾಂಕ್ರಾಮಿಕ ರೋಗಿಗಳಿಗೆ ನೀಡುವ ಔಷಧಿಗಳನ್ನು ಮಿಶ್ರಣ ಮಾಡಿ ಮಹಿಳೆ ಮೇಲೆ ಪ್ರಯೋಗ ಮಾಡಲಾಗಿದೆ. ಇದು ಯಶಸ್ಸು ಕಂಡಿದ್ದು, 48 ಗಂಟೆಗಳ ನಂತರ ನಡೆದ ಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ಕೊರೋನ ವೈರಸ್ ಇಲ್ಲ ಎಂದು ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ ಎಂದು ವೈದ್ಯರಾದ ಕ್ರೀಂಗ್‍ಸ್ಯಾಂಕ್ ಅಟ್ಟಿಪೋರ್ನ್ ವ್ಯಾನಿಚ್ ತಿಳಿಸಿದ್ದಾರೆ.
ಥೈಲ್ಯಾಂಡ್ ಸರ್ಕಾರ ಪ್ರತಿ ದಿನ ಹೊರಡಿಸುವ ಆರೋಗ್ಯ ದಿಕ್ಸೂಚಿಯಲ್ಲಿ ಕೊರೋನ ಗುಣಪಡಿಸುವ ಕುರಿತ ಮಾಹಿತಿ ನೀಡಿದೆ. ಚೀನಾದ ಮಹಿಳೆ 12 ಗಂಟೆಗಳ ಹಿಂದಷ್ಟೇ ತೀವ್ರ ನಿತ್ರಾಣರಾಗಿ ಹಾಸಿಗೆಯಲ್ಲಿ ಮಲಗಿದ್ದರು. ಆಗ ವೈದ್ಯರು ಮಿಶ್ರಿತ ಔಷಧಿಗಳನ್ನು ಕೊಟ್ಟ ಬಳಿಕ ಆಕೆ ಸುಧಾರಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಕೊರೋನ ವೈರಸ್ ವಿಶ್ವಾದ್ಯಂತ ನೂರಾರು ಮಂದಿಯನ್ನು ಬಲಿ ಪಡೆಯುತ್ತಿದೆ. 16,650 ಚೀನಾ ಪ್ರಜೆಗಳಿಗೆ ಸೋಂಕು ತಗುಲಿದ್ದು, ಇತರ 26 ದೇಶಗಳ 181 ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿದೆ. ಚೀನಾದಲ್ಲಿ 361, ಫಿಲಿಫೈನ್ಸ್‍ನಲ್ಲಿ ಒಂದು ಸೇರಿ ಒಟ್ಟು 362 ಮಂದಿ ಸಾವನ್ನಪ್ಪಿದ್ದಾರೆ.
ಮುಂದಿನ ದಿನಗಳಲ್ಲಿ ಸಾವಿನ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಆತಂಕ ಕಾಡುತ್ತಿದ್ದು, ವಿಶ್ವಸಂಸ್ಥೆ ಖುದ್ದಾಗಿ ಕೊರೋನ ವೈರಸ್‍ನ ಪರಿಣಾಮಗಳ ಬಗ್ಗೆ ತೀವ್ರ ನಿಗಾ ಇಟ್ಟಿದೆ.
ಈವರೆಗೂ ಈ ರೋಗಕ್ಕೆ ಚಿಕಿತ್ಸೆ ಇಲ್ಲಾ ಎಂಬ ಆತಂಕ ವಿಶ್ವವನ್ನು ಕಾಡುತ್ತಿತ್ತು. ಥೈಲ್ಯಾಂಡ್‍ನ ವೈದ್ಯರು ನಡೆಸಿರುವ ಪ್ರಯೋಗ ಯಶಸ್ವಿಯಾಗಿದೆ. 8ಮಂದಿ ರೋಗಿಗಳು ಗುಣಮುಖರಾಗಿ ಮನೆಗೆ ಮರಳಿದ್ದಾರೆ. 11 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಔಷಧಿಯ ಮಾದರಿಯನ್ನು ಎಲ್ಲೆಡೆ ಸಾರ್ವತ್ರಿಕಗೊಳಿಸುವ ಮುನ್ನ ಮತ್ತೊಮ್ಮೆ ಪ್ರಯೋಗಾರ್ಥ ಚಿಕಿತ್ಸೆಯನ್ನು ಖಚಿತ ಪಡಿಸಿಕೊಳ್ಳಲು ಥೈಲ್ಯಾಂಡ್ ಸರ್ಕಾರ ಮುಂದಾಗಿದೆ. ಒಂದು ವೇಳೆ ಇದು ಯಸ್ವಿಯಾದರೆ ಕೊರೋನದ ಭೀತಿ ಕ್ಷೀಣಿಸಲಿದೆ.