ಮಡಿಕೇರಿ: ಜಿಲ್ಲೆಯಲ್ಲಿ ವಿಧಿಸಿದ್ದ ಲಾಕ್‍ಡೌನ್ ಸಡಿಲಗೊಳಿಸಲಾಗಿದ್ದು, ವಾರದ ಎಲ್ಲ ದಿನಗಳೂ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಹಾಗೂ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ವಾಹನಗಳು ರಸ್ತೆಗಿಳಿಯುತ್ತಿವೆ.
ಈ ಸಂಬಂಧ ಮಾಹಿತಿ ನೀಡಿದ್ದ ಜಿಲ್ಲಾಡಳಿತ, ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಬಹುದು. ಬುಧವಾರದಿಂದ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಜಿಲ್ಲೆಯ ಒಳಗೆ ಮಾತ್ರವೇ ಸಂಚರಿಸಲು ಅವಕಾಶ ನೀಡಿದೆ.
ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ಸಂಚಾರವೂ ಪ್ರಾರಂಭವಾಗಲಿದೆ. ಆದರೆ ಒಟ್ಟು ಆಸನಗಳ ಶೇ.50 ಮೀರದಂತೆ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವಾರದ ಎಲ್ಲ ದಿನಗಳು ಸಿಎಲ್ 2, ಸಿಎಲ್ 11ಸಿ ಮಾದರಿಯ ಮದ್ಯದ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಗ್ರೀನ್ ಝೋನ್‍ನಲ್ಲಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ.
ಈ ಹಿಂದೆ ವಾರದಲ್ಲಿ ನಾಲ್ಕು ದಿನ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಇರಲಿಲ್ಲ. ಅಂಗಡಿ ಮುಂಗಟ್ಟುಗಳನ್ನು ಸಹ ವಾರದ ನಾಲ್ಕು ದಿನ ಮಾತ್ರ ತೆರೆಯುವ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಎಲ್ಲ ದಿನಗಳಲ್ಲಿ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ.