ಕೋಲಾರ: ದೇಶದಲ್ಲೇ ಮೊದಲ ಬಾರಿಗೆ ದಕ್ಷಿಣ ಕೊರಿಯಾ ರ‍್ಯಾಪಿಡ್ ಟೆಸ್ಟಿಂಗ್ ಕಿಟ್‍ಗಳ ಪ್ರಾಯೋಗಿಕ ಪರೀಕ್ಷೆಗೆ ಕೋಲಾರ ಜಿಲ್ಲೆ ಮುಂದಾಗಿದೆ.
ಸುಮಾರು 6 ಸಾವಿರ ಮಂದಿಗೆ ರ‍್ಯಾಪಿಡ್ ಟೆಸ್ಟ್ ಮಾಡುವುದಕ್ಕೆ ಕೋಲಾರ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಜ್ಜಾಗಿದೆ. ಎಲ್ಲೆಡೆ ಸಂಚಲನ ಮೂಡಿಸಿರುವ ಹಾಗೂ ಸಾಕಷ್ಟು ಸಮಯ ವ್ಯರ್ಥ ಮಾಡುತ್ತಿರುವ ರಕ್ತ ಮಾದರಿ ಹಾಗೂ ಗಂಟಲು ದ್ರವ ಸಂಗ್ರಹಿಸಿ ಎರಡು ದಿನಗಳ ಕಾಲ ವರದಿಗಾಗಿ ಕಾಯುವ ಬದಲಿಗೆ ಪ್ರಾಥಮಿಕ ಹಂತದಲ್ಲೆ ಪರೀಕ್ಷೆಗೆ ಒಳಪಡಿಸುವ ರ‍್ಯಾಪಿಡ್ ಟೆಸ್ಟ್ ಇದಾಗಿದೆ.
ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುವ ಟಾಟಾ ನರ್ವ್ ಸೆಂಟರ್ ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಟಾಟಾ ಸಂಸ್ಥೆ ದೇಶದಲ್ಲೇ ಮೊದಲ ಬಾರಿಗೆ ಸಿಎಸ್‍ಆರ್ ಅನುದಾನದಡಿಯಲ್ಲಿ ಕಿಟ್‍ಗಳನ್ನು ನೀಡಿದೆ. ದಕ್ಷಿಣ ಕೊರಿಯಾ ಕಿಟ್ ಮೂಲಕ ಕೋಲಾರದಲ್ಲಿ ರ‍್ಯಾಪಿಡ್ ಟೆಸ್ಟಿಂಗ್‍ಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತಿದೆ.
ಕೊರಿಯಾದಿಂದ ಬಂದಿರುವ ಕಿಟ್‍ಗಳಿಂದ ಪರೀಕ್ಷೆ ನಡೆಸಿದ ಕೇವಲ 20 ನಿಮಿಷದಲ್ಲಿ ಫಲಿತಾಂಶ ಸಿಗಲಿದೆ. ಇನ್ನು ರ‍್ಯಾಪಿಡ್ ಟೆಸ್ಟ್ ಮಾಡುವುದರ ಸಲುವಾಗಿ ದಕ್ಷಿಣ ಕೊರಿಯಾದಿಂದ ಸುಮಾರು 1,500 ಕಿಟ್‍ಗಳನ್ನು ಕೋಲಾರಕ್ಕೆ ತರಿಸಲಾಗಿದ್ದು, ಪ್ರತಿನಿತ್ಯ ಸುಮಾರು 200 ಮಂದಿಗೆ ಕರೊನಾ ಪರೀಕ್ಷೆ ನಡೆಯಲಿದೆ. ಈ ಹಿಂದೆ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆ ನಡೆಸಿ, ಬೆಂಗಳೂರಿಗೆ ಕಳುಹಿಸಬೇಕಾಗಿತ್ತು. ಜೊತೆಗೆ ಕೊರೊನಾ ಸೋಂಕು ವರದಿಗಾಗಿ 24 ಗಂಟೆ ಕಾಯುವ ಪರಿಸ್ಥತಿ ಇತ್ತು. ಆದರೆ ಇದೀಗ 20 ನಿಮಿಷಗಳಲ್ಲಿ ಕೋಲಾರದಲ್ಲಿಯೇ ಕೊರೊನಾ ಸೋಂಕು ಪತ್ತೆ ಹಚ್ಚಲಾಗುತ್ತದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ವಿಜಯ್ ಕುಮಾರ್ ತಿಳಿಸಿದ್ದಾರೆ.