ಖಾನಾಪುರ: ವಾರದ ಹಿಂದೆ ಖಾನಾಪುರ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕರಡಿ ದಾಳಿಯಿಂದ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವೀಸ್ಟ್ ದೊರೆತಿದ್ದು, ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಖಾನಾಪುರ ತಾಲೂಕಿನ ಅಮಟೆ ಗ್ರಾಮದ ದೇವಿದಾಸ ಗಾವಕರ್, ಸಂತೋಷ ಸೋಮಾ ಗಾವಕರ, ವಿಠ್ಠಲ ನಾಯಕ, ವಿಠ್ಠಲ ಗಣಪತಿ ನಾಯಕ, ರಾಮಾ ಗಣಪತಿ ನಾಯಕ, ಪ್ರಶಾಂತ ಗಣಪತಿ ಸುತಾರ ಬಂಧಿತರು.
ಮಾ. 11 ರಂದು ಅಮಟೆ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ದನ ಮೇಯಿಸಲು ಹೋಗಿದ್ದ ತಾನಾಜಿ ಟೋಪಾ ನಾಯಕ ಎಂಬಾತನ ಮೃತದೇಹ ಪತ್ತೆಯಾಗಿತ್ತು. ಮೊದಲು ಕರಡಿ ದಾಳಿಯಿಂದ ತಾನಾಜಿ ಸಾವನ್ನಪ್ಪಿದ್ದಾನೆ ದೂರು ದಾಖಲಾಗಿತ್ತು. ತಾನಾಜಿ ಪತ್ನಿ ತೇಜಸ್ವಿನಿ ಮಾ. 14 ರಂದು ಪತಿಯ ಸಾವಿನಲ್ಲಿ ಶಂಕೆ ಇದ್ದು, ಹೀಗಾಗಿ ಪತಿಯನ್ನು ಹತ್ಯೆ ಮಾಡಲಾಗಿದೆ ಎಂದು ದೂರು ನೀಡಿದ್ದಳು.
ಬೈಲಹೊಂಗಲ ಡಿಎಸ್ ಪಿ ಜೆ.ಎಂ. ಕರುಣಾಕರಶೆಟ್ಟಿ ನೇತೃತ್ವದಲ್ಲಿ ಖಾನಾಪುರ ಸಿಪಿಐ ಸುರೇಶ ಶಿಂಗಿ, ಪಿಎಸ್ ಐ ಬಸನಗೌಡ ಪಾಟೀಲ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ. ಮೂರು ಬಂದೂಕು, ಕಾಡತೂಸು ಹಾಗೂ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ಐವರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ