ಕಾರವಾರ: ಜಿಲ್ಲೆಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಮರಳು ಕಾರ್ಮಿಕರ ಸಂಘವು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಹಸಿರು ಪೀಠದ ಆದೇಶದಂತೆ ಕರಾವಳಿಯಲ್ಲಿ ಕಳೆದ 2022ರ ಮೇ 18 ರಂದು ಸಾಂಪ್ರದಾಯಿಕವಾಗಿ ಮರಳುದಿಬ್ಬ ತೆರವುಗೊಳಿಸಿ ಸಾಗಾಟ ಮಾಡುವುದನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತ ಆದೇಶ ನೀಡಿದೆ.
ಇದರಿಂದ ಜಿಲ್ಲೆಯಲ್ಲಿ ಮರಳು ತೆಗೆಯುವುದು ಸ್ಥಗಿತವಾಗಿದೆ.
ಜಿಲ್ಲೆಯ ಜನರಿಗೆ ಮರಳು ಲಭ್ಯವಾಗುತ್ತಿಲ್ಲ. ಸದ್ಯ ಮಂಗಳೂರಿನ ಕೆಲವು ಗುತ್ತಿಗೆದಾರರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮರಳು ತೆಗೆಯುವುದನ್ನು ಸ್ಥಿಗಿತ ಮಾಡಿದಕ್ಕಾಗಿ ವಿರುದ್ಧವಾಗಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಪರಿಶೀಲಿಸಿದ ರಾಜ್ಯ ಉಚ್ಛ ನ್ಯಾಯಾಲಯವು ತನ್ನ ಆದೇಶದಲ್ಲಿ ರಾಷ್ಟ್ರೀಯ ಹಸಿರು ಪೀಠದ ಆದೇಶವು ಉಡುಪಿ ಜಿಲ್ಲೆಗೆ ಮಾತ್ರವಾಗಿದ್ದು ಉಳಿದ ಜಿಲ್ಲೆಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.
ಆದ್ದರಿಂದ ರಾಜ್ಯ ಉಚ್ಛ ನ್ಯಾಯಾಲಯದ ಆದೇಶದ ಅನುಸಾರ ಮಂಗಳೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲೆಯ 7 ಸದಸ್ಯರ ಸಮಿತಿಯು ಸಭೆ ಸೇರಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಅನುಮತಿ ನೀಡಿದೆ.
ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಮರಳು ಸಮಿತಿ ಸಭೆ ಕರೆದು ತಮಗೆ ಮರಳು ದಿಬ್ಬ ತೆಗೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಮಾಡಿದ್ದಾರೆ.
ಮನವಿ ಸಲ್ಲಿಸುವ ನಿಯೋಗದಲ್ಲಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅಧ್ಯಕ್ಷ ದಿಗಂಬರ್ ಶೇಟ್, ಉಪಾಧ್ಯಕ್ಷ ವಿನೋದ ನಾಯ್ಕ, ಅರವಿಂದ ಕಲ್ಗುಟ್ಕರ್, ಪ್ರಮೋದ ಸಾಗೇಕರ್. ರಮಾಕಾಂತ ಮೇಸ್ತ. ಸೈಮನ್, ಪಾಂಡುರಂಗ ಪೇಡ್ನೇಕರ್ ಹಾಗೂ ಇನ್ನಿತರರು ಇದ್ದರು.