Breaking News

ಗೋಗಳ್ಳರ ಭಾರಿ ಹೈಡ್ರಾಮಾ; ಸಾರ್ವಜನಿಕರು ಹಾಗೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಸರಣಿ ಎಸ್ಕೇಪ್

Spread the love

ಭಟ್ಕಳ: ತಾಲೂಕಿನ ತಲಗೇರಿಯ ವಿವೇಕಾನಂದ ನಗರದಲ್ಲಿ ಶನಿವಾರ ತಡರಾತ್ರಿ ಗೋಗಳ್ಳರ ಭಾರಿ ಹೈಡ್ರಾಮಾವೇ ನಡೆದಿದೆ. ಹಸು ಕದಿಯಲು ಬಂದಿದ್ದ ಖದೀಮರು ಗ್ರಾಮಸ್ಥರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ವಾಹನ ಹಾಗೂ ಮೊಬೈಲ್ ಫೋನ್‌ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಮಧ್ಯರಾತ್ರಿ ಸುಮಾರು 3:45 ರ ಹೊತ್ತಿಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಗೋವನ್ನು ಕದ್ದೊಯ್ಯಲು ಯತ್ನಿಸುತ್ತಿದ್ದಾಗ ವಿವೇಕಾನಂದ ನಗರದ ಗ್ರಾಮಸ್ಥರು ಅವರನ್ನು ಸುತ್ತುವರೆದಿದ್ದಾರೆ. ಈ ವೇಳೆ ಸಿಕ್ಕಿಬೀಳುವ ಭಯದಿಂದ ಆರೋಪಿಗಳು ಕಾರಿನಲ್ಲೇ ತಮ್ಮ ಮೊಬೈಲ್ ಬಿಟ್ಟು ಕತ್ತಲಲ್ಲಿ ಪರಾರಿಯಾಗಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡ ಆರೋಪಿಗಳು ಪಕ್ಕದ ಅರಣ್ಯ ಪ್ರದೇಶದಲ್ಲಿ ಅವಿತುಕೊಂಡು, ಮತ್ತೊಂದು ಮೊಬೈಲ್ ಮೂಲಕ ಬೇರೊಂದು ಗೋಗಳ್ಳರ ತಂಡವನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ತಕ್ಷಣ ಎಚ್ಚೆತ್ತ ಗ್ರಾಮಸ್ಥರು ಭಟ್ಕಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಅರಿತ ಆರೋಪಿಗಳು ಕರಿಕಲ್ ರಸ್ತೆಯ ಸೀತಾರಾಮ್ ಬ್ಯಾಂಕಿನ ಹಿಂಬದಿ ಅವಿತು ಕುಳಿತಿದ್ದರು. ಈ ವೇಳೆ ಕಾರ್ಯಾಚರಣೆಗಿಳಿದ ಪೊಲೀಸರು ಹಾಗೂ ಗ್ರಾಮಸ್ಥರು ಜಂಟಿಯಾಗಿ ಅವರನ್ನು ಸೆರೆಹಿಡಿಯಲು ಮುಂದಾದಾಗ, ಆರೋಪಿಗಳು ತಾವು ತಂದಿದ್ದ ಬೈಕ್ ಅನ್ನು ಅಲ್ಲೇ ಬಿಟ್ಟು ಮತ್ತೆ ಪರಾರಿಯಾಗಿದ್ದಾರೆ. ಆರೋಪಿಗಳ ಈ ಸರಣಿ ಎಸ್ಕೇಪ್ ಹೈಡ್ರಾಮಾದಿಂದ ಗ್ರಾಮಸ್ಥರು ಹಾಗೂ ಪೊಲೀಸರು ಸುಸ್ತಾಗುವಂತಾಗಿದೆ.

ನಕಲಿ ನಂಬರ್ ಪ್ಲೇಟ್ ಬಳಸಿ ದಿಕ್ಕು ತಪ್ಪಿಸುವ ಯತ್ನ:
ಈ ಕಳ್ಳರು ಪೊಲೀಸರು ಹಾಗೂ ಸಾರ್ವಜನಿಕರ ಕಣ್ತಪ್ಪಿಸಲು ಸ್ವಿಫ್ಟ್ ಕಾರಿಗೆ (KA-19 MR-3233) ಅಸಲಿ ನಂಬರ್ ಜೊತೆಗೆ ನಕಲಿ ನಂಬರ್ ಪ್ಲೇಟ್ (KA-47 N-0081) ಅಳವಡಿಸಿ ಜನರನ್ನು ದಿಕ್ಕುತಪ್ಪಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಕಾರ್ಯಾಚರಣೆಯ ವೇಳೆ ಎ.ಎಸ್.ಐ ಮಂಜುನಾಥ ಬಿ. ಗೌಡರ ಮತ್ತು ಸಿಬ್ಬಂದಿ ಗಿರೀಶ್ ಎಸ್.ಎಂ. ಅವರು ಆರೋಪಿಗಳನ್ನು ವಶಕ್ಕೆ ಪಡೆಯಲು ಹೋದಾಗ, ಐವರು ಆರೋಪಿಗಳು ಸಮವಸ್ತ್ರದಲ್ಲಿದ್ದ ಪೊಲೀಸರ ಮೇಲೆ ಕೈಯಿಂದ ಹಲ್ಲೆ ನಡೆಸಿ, ದೂಡಿ ಹಾಕಿ ಗಾಯಗೊಳಿಸಿ ಪರಾರಿಯಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಜಾಲಿ ಮತ್ತು ತಲಗೇರಿ ಭಾಗದಲ್ಲಿ ಗೋವುಗಳ ಕಳ್ಳತನ ಹೆಚ್ಚಾಗಿದ್ದರಿಂದ, ಹೇಗಾದರೂ ಮಾಡಿ ಈ ಕಳ್ಳರನ್ನು ಹಿಡಿಯಲೇಬೇಕು ಎಂದು ಗ್ರಾಮಸ್ಥರು ಶಪಥ ಮಾಡಿದ್ದರು. ಇದೀಗ ಅವರ ಯತ್ನ ಭಾಗಶಃ ಯಶಸ್ವಿಯಾಗಿದ್ದು, ದಿನನಿತ್ಯ ಸಾಕಿ ಸಲಹಿದ ಗೋವುಗಳನ್ನು ಕದ್ದೊಯ್ಯುತ್ತಿರುವ ಈ ಕಳ್ಳರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ತೀವ್ರವಾಗಿ ಆಗ್ರಹಿಸಿದ್ದಾರೆ.

ಪೊಲೀಸರು ಸ್ಥಳದಲ್ಲಿ ಬಿಳಿ ಬಣ್ಣದ ಸ್ವಿಫ್ಟ್ ಕಾರು, ಸುಜುಕಿ ಆಕ್ಸೆಸ್ ಸ್ಕೂಟರ್, ಆರೋಪಿಗಳು ಬಿಟ್ಟುಹೋದ ಮೊಬೈಲ್ ಫೋನ್‌ಗಳು ಹಾಗೂ ಕಳ್ಳತನ ಮಾಡಿದ್ದ ಒಂದು ಆಕಳು ಮತ್ತು ಕರುವನ್ನು ವಶಪಡಿಸಿಕೊಂಡಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ ಸೋಮರಾಜ ಟಿ. ರಾಠೋಡ ನೇತೃತ್ವದಲ್ಲಿ ತಲೆಮರೆಸಿಕೊಂಡಿರುವ ಐವರು ಆರೋಪಿಗಳಿಗಾಗಿ ತೀವ್ರ ಶೋಧ ಮುಂದುವರಿದಿದೆ.


Spread the love

About Laxminews 24x7

Check Also

22 ಕೇಸ್‌ನ 36 ಜನ ಅರೆಸ್ಟ್ – 1.27 ಕೋಟಿ ಮೌಲ್ಯದ ಚಿನ್ನಾಭರಣ, 2 ಕಾರು, 17 ಬೈಕ್ ಜಪ್ತಿ

Spread the loveವಿಜಯಪುರ: ಚಿನ್ನಾಭರಣ, ಬೆಳ್ಳಿ, 2 ಕಾರು, 17 ಬೈಕ್ ಜಪ್ತಿ ಸೇರಿದಂತೆ 1.27 ಕೋಟಿ ರೂ. ಮೌಲ್ಯದ ವಸ್ತುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ