ಹಾಸನ: ಕೊರೊನಾ ಲಾಕ್‍ಡೌನ್‍ನಿಂದಾಗಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಬದುಕು ಬೀದಿಗೆ ಬಂದಿದೆ. ಈ ವೇಳೆ ರೈತರು ಹಾಲು ಉತ್ಪಾದನೆ ಮಾಡಿ ಒಂದಷ್ಟು ಬದುಕು ಕಟ್ಟಿಕೊಂಡಿದ್ರು. ಆದರೆ ಈಗ ಹಾಲಿಗೆ ಫ್ಯಾಟ್ ಬರುತ್ತಿಲ್ಲ ಎಂದು ನೆಪ ಹೇಳಿ ಒಂದು ಲೀಟರ್ ಹಾಲಿಗೆ ಕೇವಲ 9 ರೂಪಾಯಿ ಕೊಡುತ್ತಿದ್ದು, ಕಂಗಾಲಾದ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ ಗ್ರಾಮದ ಸುತ್ತಮುತ್ತಲಿನ ರೈತರು ಕೊರೊನಾ ಭಯ ಲೆಕ್ಕಿಸದೇ ಗುಂಪು ಗುಂಪಾಗಿ ನಿಂತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಮಯದಲ್ಲಿ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದ ಇವರು ಹೈನುಗಾರಿಕೆ ಮಾಡಿ, ಡೈರಿಗೆ ಹಾಲು ಹಾಕಿ ಹೇಗೋ ಜೀವನ ನಿರ್ವಹಣೆ ಮಾಡಿಕೊಂಡಿದ್ರು. ಆದರೆ ಈಗ ಏಕಾಏಕಿ ಹಾಲಿನ ಡೈರಿಯವರು ನಿಮ್ಮ ಹಾಲಿನಲ್ಲಿ ಸರಿಯಾದ ಎಸ್‍ಎನ್‍ಎಫ್ ಬರುತ್ತಿಲ್ಲ ಎಂದು ಹೇಳಿ ಪ್ರತಿ ಲೀಟರ್‍ಗೆ 9 ರೂಪಾಯಿ ನೀಡುತ್ತಿದ್ದಾರಂತೆ. ಇದರಿಂದ ಕಂಗಾಲಾದ ರೈತರು ಒಂದು ಲೀಟರ್ ಹಾಲು ಉತ್ಪಾದನೆಗೆ ತಗಲುವ ವೆಚ್ಚದ ಅರ್ಧದಷ್ಟು ಹಣವನ್ನೂ ಕೊಡದೆ ಹೀಗೆ ನಮ್ಮ ಬದುಕಿಗೆ ಕೊಳ್ಳಿ ಇಡ್ತಿದ್ದೀರಲ್ಲಾ ಅಂತ ಸಂತೆಶಿವರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಎಸ್‍ಎನ್‍ಎಫ್ ಬರುತ್ತಿಲ್ಲ ಎಂದು ಸಂತೆಶಿವರ ಡೈರಿಯವರು ನಮ್ಮ ಹಾಲಿಗೆ ಸರಿಯಾದ ಬೆಲೆ ಕೊಡುತ್ತಿಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ನಾವು ಕೊಟ್ಟಷ್ಟು ಹಣ ಪಡೆದು ಬಾಯಿಮುಚ್ಚಿಕೊಂಡು ಇರಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿ ಆದರೆ ನಮ್ಮ ಬದುಕು ಹೇಗೆ ಎಂದು ರೈತರು ಕಂಗಾಲಾಗಿದ್ದಾರೆ.
ಕೊರೊನಾದಿಂದ ಎಷ್ಟೇ ನಷ್ಟ ಆದರೂ ಕೂಡ ಹೇಗೋ ಹಾಲು ಹಾಕಿ ರೈತರು ಜೀವನ ನಡೆಸುತ್ತಿದ್ರು. ಆದರೆ ಇದೀಗ ಹಾಲಿನ ಫ್ಯಾಟ್ ಸರಿಯಾಗಿ ಬರುತ್ತಿಲ್ಲ ಎಂದು ನೆಪ ಹೇಳಿ, ಒಂದು ಲೀಟರ್‍ಗೆ 9 ರೂಪಾಯಿ ಕೊಡಲು ಮುಂದಾಗಿರುವುದು ರೈತರ ಬದುಕನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.