ಬೆಂಗಳೂರು: ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದ್ದವರ ಪೈಕಿ ಇಬ್ಬರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ 68 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ, ಅವರ ಗಂಟಲು ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಗೆ ಕಳುಹಿಸಿದ್ದ ಎಲ್ಲಾ ವರದಿಗಳು ನೆಗೆಟಿವ್ ಬಂದಿದೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ಸಮಾಧಾನ ವ್ಯಕ್ತಪಡಿಸಿ, ರಾಮನಗರಕ್ಕೆ ಹಸಿರು ಜಿಲ್ಲೆಗೆ ನೀಡಿರುವ ರಿಯಾಯಿತಿಗಳನ್ನು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ರಾಜಧಾನಿಯ ಕೈದಿಗಳಿಂದ ಕರೋನಾ ಸೋಂಕು ಭೀತಿಗೊಳಗಾಗಿದ್ದ ನಗರಸಭೆ, ಜೈಲು ಸಿಬ್ಬಂದಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿ 68 ಮಂದಿಯ ವೈದ್ಯಕೀಯ ಪರೀಕ್ಷೆ ವರದಿ ನೆಗೆಟಿವ್ ಬಂದಿರುವುದು ಸಮಾಧಾನ ತಂದಿದೆ. ಇನ್ನೂ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ರಾಮನಗರ ಜಿಲ್ಲೆಯನ್ನುಕರೋನಾ ಮುಕ್ತ ಜಿಲ್ಲೆಯನ್ನಾಗಿ ಕಾಯ್ದುಕೊಳ್ಳಲು ಎಲ್ಲರೂ ಸಂಕಲ್ಪ ಮಾಡೋಣ. ಸರ್ಕಾರವು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸಲಿ. ನೆಗೆಟಿವ್ ವರದಿ ಬಂದಿದೆ ಎಂದು ಮೈಮರೆಯುವ ಸಮಯ ಇದಲ್ಲ. ತಾಂತ್ರಿಕ ಕಾರಣಗಳಿಂದ ಕೆಂಪು ವಲಯವಾಗಿ ಪರಿವರ್ತಿತವಾಗಿದ್ದ ರಾಮನಗರ ಜಿಲ್ಲೆಯನ್ನು ಹಸಿರು ವಲಯವನ್ನಾಗಿ ಮಾರ್ಪಡಿಸಿ, ಹಸಿರು ವಲಯದ ಜಿಲ್ಲೆಗಳಿಗೆ ನೀಡಿರುವ ವಿನಾಯಿತಿಯನ್ನು ಘೋಷಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.