ಹುಬ್ಬಳ್ಳಿ: ಕೊರೊನಾ ಲಾಕ್‍ಡೌನ್‍ನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಡಿಲಿಕೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯ ಆಡಳಿತ ಕಚೇರಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಮೇ 4ರಿಂದ ಶೇ.33 ಸಿಬ್ಬಂದಿಯೊಂದಿಗೆ ಕೆಲಸ ಆರಂಭಿಸಿವೆ.
ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತೆ ಕೆಲಸಕ್ಕೆ ಹಾಜರಾಗುತ್ತಿರುವುದರಿಂದ ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿನ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಪ್ರವೇಶದ್ವಾರದಲ್ಲಿ ದೇಹ ತಾಪಮಾನ ಸ್ಕ್ರೀನಿಂಗ್ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾರ್ಯಾಗಾರಕ್ಕೆ ಪ್ರವೇಶಿಸುವ ಎಲ್ಲ ಸಿಬ್ಬಂದಿಯನ್ನು ಪರೀಕ್ಷಿಸಲಾಗುತ್ತಿದೆ. ಇನ್‍ಫ್ರಾರೆಡ್ ಸ್ಮಾರ್ಟ್ ಕ್ಯಾಮೆರಾದೊಂದಿಗೆ ದೇಹದ ಉಷ್ಣಾಂಶ ಅಳೆಯುವ ಥರ್ಮಲ್ ಸ್ಕ್ರೀನಿಂಗ್ ಬಳಸಲಾಗುತ್ತಿದೆ. ಈ ಮೂಲಕ ದಕ್ಷತೆಯೊಂದಿಗೆ ಸುರಕ್ಷಿತ ಸ್ಥಳಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಇನ್‍ಫ್ರಾರೆಡ್ ಸ್ಮಾರ್ಟ್ ಕ್ಯಾಮೆರಾಗಳು ಒಂದೇ ಬಾರಿಗೆ 20 ಜನರ ದೇಹದ ಉಷ್ಣಾಂಶ ಅಳೆಯುವ ಸಾಮರ್ಥ್ಯ ಹೊಂದಿದೆ. ಯಾವುದೇ ಸಿಬ್ಬಂದಿಯ ದೇಹದ ಉಷ್ಣಾಂಶ ಹೆಚ್ಚಾಗಿದ್ದರೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಡಲಾಗುತ್ತಿದೆ. ನೌಕರನ ದೇಹದ ಉಷ್ಣತೆಯು 37.5 ಸೆಲ್ಸಿಯಸ್ ದಾಟಿದರೆ ಥರ್ಮಲ್ ಸ್ಕ್ರೀನಿಂಗ್ ಕೆಂಪು ಬಣ್ಣ ತೋರಿಸಿ, ಬಜರ್ ಧ್ವನಿಯೊಂದಿಗೆ ಎಚ್ಚರಿಕೆ ನೀಡುತ್ತದೆ. ಹೀಗಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿದೆ.
ಪ್ರವೇಶದ್ವಾರದಲ್ಲಿ ಅಳವಡಿರುವ ಸಿಸ್ಟಮ್ ಹೆಚ್ಚಿನ ಉಷ್ಣಾಂಶ ಸಂವೇದನೆಯೊಂದಿಗೆ ಇಮೇಜ್ ಸೆನ್ಸರ್ ಅನ್ನು ಹೊಂದಿದೆ. ಕ್ಯಾಮೆರಾಗಳು ಹೆಚ್ಚು ನಿಖರವಾದ ಚಿತ್ರ ಮತ್ತು ತಾಪಮಾನ ವ್ಯತ್ಯಾಸದ ಮಾಹಿತಿಯನ್ನು ಸೆರೆಹಿಡಿಯಲು ಅನುಕೂಲವಾಗಿವೆ.