ಹುಬ್ಬಳ್ಳಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್, ಪೊಲೀಸರು, ಪೌರಕಾರ್ಮಿಕರು ಹಾಗೂ ಮಾಧ್ಯಮದವರಿಗೆ ಮರಳು ಶಿಲ್ಪದ ಮೂಲಕ ಗೌರವ ಸಲ್ಲಿಸಲಾಗಿದೆ.
ನಗರದ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಈ ವಿಶೇಷ ಮರಳು ಶಿಲ್ಪವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ವೀಕ್ಷಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೊರೊನಾ ಸೊಂಕಿತರು ಹಾಗೂ ಪ್ರಾಥಮಿಕ ಹಂತದಕ್ಕೆ ಸಂಪರ್ಕಕ್ಕೆ ಬಂದವರ ವಿವರವನ್ನು ಕಲೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ವೈದ್ಯರು ಜೀವದ ಹಂಗು ತೋರದು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕಿಮ್ಸ್ ವೈದ್ಯರ ಪರಿಶ್ರಮದಿಂದಾಗಿ ಜಿಲ್ಲೆಯ ಇಬ್ಬರು ಕೋವಿಡ್-19 ರೋಗಿಗಳು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಧಾರವಾಡ ಜಿಲ್ಲಾಡಳಿತ, ಪೊಲೀಸರು, ಪಾಲಿಕೆ ಪೌರಕಾರ್ಮಿಕರು ಸಹ ಸಮರ್ಪಣಾ ಭಾವದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಇತರೆ ಸರ್ಕಾರೇತರ ಸಂಘ ಸಂಸ್ಥೆಗಳು ಕೈ ಜೋಡಿಸಿದ್ದಾರೆ. ಮಾಧ್ಯಮದವರು ಕೊರೊನಾ ವಿರುದ್ದ ಹೋರಾಟದಲ್ಲಿ ಸಕ್ರಿಯವಾಗಿವ ಭಾಗವಹಿಸಿ ಜನರಲ್ಲಿ ತಿಳಿವಳಿಕೆ ಮೂಡಿಸುತ್ತಿದ್ದಾರೆ. ಇವರೆಲ್ಲರಿಗೂ ಗೌರವ ಸಮರ್ಪಿಸುವ ನಿಟ್ಟಿನಲ್ಲಿ ಕಲಾವಿದ ಮಂಜುನಾಥ ಹಿರೇಮಠ ಮರಳು ಶಿಲ್ಪ ರಚನೆ ಮಾಡಿದ್ದಾರೆ. ಕಲಾಕೃತಿ ಸುಂದರವಾಗಿ ಮೂಡಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಂತ ಹಂತವಾಗಿ ಉದ್ದಿಮೆಗಳನ್ನು ತೆರೆಯಲು ಅವಕಾಶ
ಕೇಂದ್ರ ಸರ್ಕಾರದ ನಿಯಮಗಳಂತೆ ಮೊದಲ ಹಂತದಲ್ಲಿ ಗ್ರಾಮೀಣ ಭಾಗದ ಹಾಗೂ ಅಗತ್ಯ ವಸ್ತುಗಳು ನಿರ್ಮಿಸುವ ಕೈಗಾರಿಕೆ ತೆರೆಯಲು ಅನುಮತಿ ನೀಡಲಾಗಿದೆ. ಇದರ ಪರಿಣಾಮಗಳನ್ನು ಅವಲೋಕಿಸಿ ಹಂತ ಹಂತವಾಗಿ ಉದ್ದಿಮೆಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದರು.
ಹುಬ್ಬಳ್ಳಿ ಕಂಟ್ಯಾಮಿನೇಟೆಡ್ ಜೋನ್ ಹೊರತು ಪಡಿಸಿ ಬೇರೆ ಸ್ಥಳ ಹಾಗೂ ಧಾರವಾಡ ಬೇಲೂರಿನಲ್ಲಿ ಕೈಗಾರಿಕೆಗಳನ್ನು ತೆರೆದು ಆರ್ಥಿಕ ಚಟುವಟಿಕೆಗಳು ಪಾರಂಭವಾಗಲಿ ಎಂಬ ಆಶಯ ಸರ್ಕಾರಕ್ಕೆ ಇದೆ. ಕಂಟ್ಯಾಮಿನೇಟೆಡ್ ಜೋನ್‍ನ ಕೊವೀಡ್-19 ರೋಗಿಯ ವರದಿ ನೆಗೆಟಿವ್ ಬಂದರೆ ಅಲ್ಲಿಯೂ ಉದ್ಯಮೆಗಳನ್ನು ತೆರೆಯಬಹುದು ಎಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಅಬ್ಬಯ್ಯ ಪ್ರಸಾದ್, ಶ್ರೀನಿವಾಸ ಮಾನೆ, ಎಸ್.ವಿ ಸಂಕನೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆರ್. ದಿಲೀಪ್, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್, ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ್ ಮಾಡ್ಯಾಳ, ಕಲಾವಿದ ಮಂಜುನಾಥ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.