ಬೆಂಗಳೂರು: ಸಿನಿಮಾದಲ್ಲಿ ಬರುವ ಭಯಾನಕ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ ಎಂದು ಚಂದನವದ ನಟಿ ಹರಿಪ್ರಿಯಾ ಹೇಳಿದ್ದಾರೆ.
ಲಾಕ್‍ಡೌನ್‍ನಿಂದ ಮನೆಯಲ್ಲೇ ಕುಳಿತಿರುವ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಅಂತೆಯೇ ನಟಿ ಹರಿಪ್ರಿಯಾ ಕೂಡ ತಮ್ಮ ಬ್ಲಾಗ್‍ನಲ್ಲಿ ಆಗಾಗ ತಮ್ಮ ಅನುಭವದ ಕಥೆಯನ್ನು ಬರೆದು ಪೋಸ್ಟ್ ಮಾಡುತ್ತಿರುತ್ತಾರೆ. ಈಗ ಜಿರಳೆ ಕಥೆಯೊಂದು ಬರೆದು ತಮ್ಮ ಲೇಡಿ ಫ್ಯಾನ್ಸ್ ಗೆ ಸಲಹೆಯೊಂದನ್ನು ಹೇಳಿದ್ದಾರೆ
ಈ ವಿಚಾರವಾಗಿ ತಮ್ಮ ಬ್ಲಾಗ್‍ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಹರಿಪ್ರಿಯಾ ಜಿರಳೆಗಳನ್ನು ಕಂಡರೆ ನನಗೇಕೆ ಅಷ್ಟು ಭಯ ಎಂದು ತಿಳಿಯುತ್ತಿಲ್ಲ. ನಮ್ಮ ಕುಟುಂಬದಲ್ಲಿ ಹೆಚ್ಚಿನವರು ಜಿರಳೆಯನ್ನು ಕಂಡರೆ ಹೆದರಿ ಓಡುತ್ತಾರೆ. ಅದರಲ್ಲಿ ನಮ್ಮ ಅಮ್ಮ, ಚಿಕ್ಕಮ್ಮ ಕೂಡ ಜಿರಳೆಯನ್ನು ಕಂಡಾಗ ಭಯಪಡುತ್ತಿದ್ದರು. ಅವರಿಂದಾಗಿ ನನಗೂ ಜಿರಳೆಯನ್ನು ಕಂಡಾಗ ಭಯ ಹುಟ್ಟಿಕೊಂಡಿದೆ. ಇದಕ್ಕೆ ಅವರೇ ಹೊಣೆ ಎಂದು ಹರಿಪ್ರಿಯಾ ತಿಳಿಸಿದ್ದಾರೆ.
ಮಹಿಳೆಯರಿಗೆ ಎಲ್ಲವನ್ನು ಎದುರಿಸಬಲ್ಲ ಶಕ್ತಿ ಇರುತ್ತದೆ. ಆದರೆ ಕೆಲವರಿಗೆ ಜಿರಳೆಯನ್ನು ಕಂಡರೆ ಭಯವಾಗುತ್ತದೆ. ಇನ್ನು ಕೆಲವರು ಜಿರಳೆ ಹತ್ತಿರ ಬಂದರೆ ಸಾಕು ಓಡಿ ಹೋಗುತ್ತಾರೆ. ನಾನು ಕೂಡ ಅಷ್ಟೇ ಜಿರಳೆಯನ್ನು ಕಂಡರೆ ಭಯಪಡುತ್ತೇನೆ. ಜಿರಳೆಗಳು ನೋಡಲು ಚಿಕ್ಕದಾಗಿದ್ದರೂ ದೊಡ್ಡ ಮಹಿಳೆಯನ್ನು ಹೆದರಿಸಿಬಿಡುತ್ತವೆ. ಮಹಿಳೆಯರೂ ಕೂಡ ದೊಡ್ಡ ಗಾತ್ರದ ಡೈನೋಸರ್ಸ್ ಅನ್ನು ಬೇಕಾದರೂ ಪಳಗಿಸುತ್ತಾರೆ. ಆದರೆ ಜಿರಳೆಯನ್ನು ಕಂಡರೆ ಭಯಪಡುತ್ತಾರೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಮಹಿಳೆಯರಿಗೊಂದು ಸಣ್ಣ ಸಲಹೆ, ನೀವು ಜಿರಳೆಯನ್ನು ಕಂಡು ಭಯಪಡುತ್ತೀರಾ ಎಂಬ ವಿಚಾರವನ್ನು ಪುರುಷರೊಂದಿಗೆ ಹೇಳಿಕೊಳ್ಳಬೇಡಿ. ಅವರು ನಿಮ್ಮನ್ನು ಹೆದರಿಸಲು ಈ ತಂತ್ರವನ್ನು ಮುಂದೆ ಬಳಸಬಹುದು. ಈ ಹಿಂದೆ ಕೂಡ ನನ್ನ ಸ್ನೇಹಿತರು ಜಿರಳೆಯನ್ನು ಹಿಡಿದುಕೊಂಡು ನನಗೆ ಭಯಪಡಿಸಿದ್ದರು. ಅದರ ಕಾಲುಗಳನ್ನು ಹಿಡಿದುಕೊಂಡು ನನ್ನ ಕಣ್ಣುಗಳ ಮುಂದೆ ತಂದಿದ್ದರು. ನಾನು ಜಿರಳೆ ಕಂಡು ಜೋರಾಗಿ ಕಿರುಚಿದೆ ಎಂದು ಹರಿಪ್ರಿಯಾ ಅನುಭವವನ್ನು ಬರೆದಿದ್ದಾರೆ.
ಜಿರಳೆ ನನ್ನ ಕಡೆಗೆ ಒಂದು ಹೆಜ್ಜೆ ಇಟ್ಟರೆ, ನಾನು ಸಾವಿರ ಹೆಜ್ಜೆ ಹಿಂದಕ್ಕೆ ಓಡುತ್ತೇನೆ. ನನ್ನ ಕೋಣೆಯಲ್ಲಿ ಜಿರಳೆ ಕಂಡರೆ ಒಂದೋ ಅದು ಸಾಯಬೇಕು. ಇಲ್ಲವೇ ಅದು ಬೇರೆ ಕಡೆ ಹೋಗಬೇಕು. ಸಿನಿಮಾದಲ್ಲಿನ ವಿಲನ್ ಕೂಡ ಜಿರಳೆಯಷ್ಟು ಭಯ ಹುಟ್ಟಿಸುವುದಿಲ್ಲ. ಆದರೆ ಈಗ ಜಿರಳೆಯ ಭಯವನ್ನು ನಾನು ನಿವಾರಿಸಿಕೊಂಡಿದ್ದೇನೆ. ಇನ್ನು ನಿಮ್ಮ ಸರದಿ ಎಂದು ತಮ್ಮ ಬ್ಲಾಗ್‍ನಲ್ಲಿ ಬರೆದುಕೊಂಡಿದ್ದಾರೆ.