ಗೋಕಾಕ: ಜನತೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿ, ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ವಿಶೇಷ ಆಧುನಿಕ ತಂತ್ರಜ್ಞಾನ ಸಹಕಾರದೊಂದಿಗೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ರವಿವಾರದಂದು ನಗರದ ಗುರುವಾರ ಪೇಠೆಯಲ್ಲಿ ಆರೋಗ್ಯ ಇಲಾಖೆಯಿಂದ ನೂತನವಾಗಿ ಪ್ರಾರಂಭಿಸಲಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯವಂತರಾಗಿರಿರೆಂದು ಕರೆ ನೀಡಿದರು.
ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರದ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಕೇಂದ್ರವನ್ನು ಪ್ರಾರಂಭಿಸಿ ಜನ ಸಾಮಾನ್ಯರಿಗೆ ತ್ವರಿತ ಗತಿಯಲ್ಲಿ ಆರೋಗ್ಯ ಸೇವೆಯನ್ನು ಒದಗಿಸಲು ಶ್ರಮಿಸಲಾಗುತ್ತಿದೆ. ಗುರುವಾರ ಪೇಟೆಯ ಭಾಗದಲ್ಲಿ ಬರುವ ಬಡ ಜನರ ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿರುವ ಈ ಕೇಂದ್ರದಲ್ಲಿ ಆರೋಗ್ಯ ಇಲಾಖೆಯವರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ರೋಗಿಗಳ ಸಮಸ್ಯೆಗೆ ಸ್ಪಂಧಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಉತ್ತರ ಕರ್ನಾಟಕ ಹೆಚ್ಚುವರಿ ನಿರ್ದೇಶಕ ಡಾ: ಎ.ಎಮ್.ನರಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ: ಎಸ್.ವಿ.ಮುನ್ನಾಳ, ಎಡಿಎಚ್‍ಓ ಡಾ: ಎಸ್.ಎಸ್.ಗಡೇದ, ಆರ್‍ಸಿಎಚ್‍ಓ ಆಯ್.ಪಿ.ಗಡಾದ, ಟಿಎಚ್‍ಓ ಡಾ: ಎಮ್.ಎಸ್.ಕೊಪ್ಪದ, ಸಿಎಮ್‍ಓ ಡಾ: ರವೀಂದ್ರ ಅಂಟಿನ್, ಡಾ: ಆರ್.ಎಸ್.ಬೆಣಚಿನಮರಡಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬದವರಾಜ ಆರೆನ್ನವರ ಸೇರಿದಂತೆ ಅನೇಕರು ಇದ್ದರು.