ಗದಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಮನೆಗೆ ಹೋಗುತ್ತಿದ್ದಾಗ ಅಪಘಾತವಾಗಿ ಆಸ್ಪತ್ರೆಗೆ ಸೇರಿದ್ದ ಇಬ್ಬರು ವಿದ್ಯಾರ್ಥಿಗಳ ಪೈಕಿ ಓರ್ವನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮುಂಡರಗಿ ತಾಲೂಕಿನ ಕಲಕೇರಿ ಪರೀಕ್ಷಾ ಕೇಂದ್ರದಿಂದ ಜೂನ್ 25ರಂದು ಮೊದಲ ಪರೀಕ್ಷೆ ಮುಗಿಸಿ ಬೈಕ್‍ನಲ್ಲಿ ಮೂವರು ವಿದ್ಯಾರ್ಥಿಗಳು ಬಾಗೇವಾಡಿ ಗ್ರಾಮಕ್ಕೆ ಹೊರಟಿದ್ದರು. ಈ ವೇಳೆ ದಾರಿ ನಡುವೆ ಲಾರಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಸ್ಥಳಲ್ಲೇ ಓರ್ವ ಮೃತಪಟ್ಟಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಆತಂಕದ ಹಿನ್ನೆಲೆ ಇಬ್ಬರು ವಿದ್ಯಾರ್ಥಿಗಳ ಗಂಟಲು ದ್ರವವನ್ನು ಕೋವಿಡ್-19 ಕಳುಹಿಸಲಾಗಿತ್ತು. ಈ ಪೈಕಿ ಬಳ್ಳಾರಿ ತಾಲೂಕಿನ ಕಪಗಲ್ ಗ್ರಾಮದ ವಿದ್ಯಾರ್ಥಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ವಿದ್ಯಾರ್ಥಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಕಲಕೇರಿ ಪರೀಕ್ಷಾ ಕೇಂದ್ರದಲ್ಲಿ ಆತನೊಂದಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗಿದೆ. ಇತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಯ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ.