ಧಾರವಾಡ: ಅಕ್ರಮವಾಗಿ 74 ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಧಾರವಾಡದ ಗರಗ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳದ ಕಾಸರಗೋಡಿನಿಂದ 27 ಮತ್ತು ಮಂಗಳೂರಿನಿಂದ 47 ಕಾರ್ಮಿಕರನ್ನು ಹೊತ್ತ ಲಾರಿಗಳು ರಾಜಸ್ಥಾನಕ್ಕೆ ಹೊರಟಿದ್ದವು. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರ್.ಜೆ. 14 ಜಿಜೆ-2909 ಹಾಗೂ ಎಚ್‍ಆರ್- 46 ಸಿಎಸ್- 703 ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ಎಲ್ಲ ವಲಸೆ ಕಾರ್ಮಿಕರಿಗೆ ಧಾರವಾಡ ಪಟ್ಟಣಶೆಟ್ಟಿ ಕಲ್ಯಾಣಮಂಟಪದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಲಾರಿಯ ಚಾಲಕರಿಬ್ಬರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಎಲ್ಲ ಕಾರ್ಮಿಕರಿಗೆ ರಾಜಸ್ಥಾನಕ್ಕೆ ಹೋಗಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.