ಧಾರವಾಡ: ಮದ್ಯ ಮಾರಾಟದಿಂದ ಆದಾಯದ ವಿಚಾರ ಹೇಳುತ್ತಿರುವುದು ನಾಚಿಕೆತನ, ಮದ್ಯ ನಿಷೇಧಿಸಬೇಕೆಂದು ಅಭಿಯಾನ ನಡೆಸುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದಲ್ಲಿ ಹಲವು ಸಂಘಟನೆಗಳು ಸೇರಿ ರಾಜ್ಯ ಸರ್ಕಾರ ಮದ್ಯ ನಿಷೇಧ ಮಾಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮನವಿ ಮಾಡಿವೆ. ಈ ವೇಳೆ ಮಾತನಾಡಿದ ಮುತಾಲಿಕ್, ಲಾಕ್‍ಡೌನ್ ಸಡಿಲಗೊಳಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾದ ಮದ್ಯಪಾನ ಮಾರಾಟಕ್ಕೆ ಅನುಮತಿ ಕೊಟ್ಟಿದ್ದು ನಿರ್ಲಜ್ಜತನದ ಸಂಗತಿ, ಇದು ನಿಷೇಧ ಆಗಬೇಕು. ಮದ್ಯ ಮಾರಾಟದಿಂದ ಆದಾಯದ ವಿಚಾರ ಹೇಳುತ್ತಿರುವುದು ನಾಚಿಕೆತನ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ವೈನ್ ಲಾಬಿಗೆ ಸರ್ಕಾರ ಬಲಿಯಾಗಿದೆ. ಮದ್ಯಪಾನ ಬಡವರನ್ನು ಅನಾಹುತದತ್ತ ತೆಗೆದುಕೊಂಡು ಹೋಗುತ್ತದೆ ಎಂದು ಕಿಡಿಕಾರಿದರು. ರಾಜ್ಯ ಸರ್ಕಾರದಿಂದ ನರಕಕ್ಕೆ ತಳ್ಳುವ ಕೆಲಸ ನಡೆದಿದೆ. ಸರ್ಕಾರಕ್ಕೆ ಇದರ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಡೀ ದೇಶಾದ್ಯಂತ ಮದ್ಯಪಾನ ಆರಂಭಕ್ಕೆ ವಿರೋಧ ವ್ಯಕ್ತವಾಗಿದೆ. ಶಾಸಕರು, ಸ್ವಾಮೀಜಿಗಳು ಕೂಡಾ ಇದಕ್ಕೆ ವಿರೋಧ ಮಾಡಿದ್ದಾರೆ. ಇದರ ಪರಿಣಾಮ ಸರ್ಕಾರ ಅನುಭವಿಸಲಿದೆ. ಈ ಬಗ್ಗೆ ಅಭಿಯಾನ ನಡೆಸುವುದಾಗಿ ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.