ನವದೆಹಲಿ, ಮೇ 20- ದೇಶಾದ್ಯಂತ ಕೊರೊನಾ ವೈರಸ್ ಸೋಂಕು ಮತ್ತು ಸಾವು ಪ್ರಕರಣ ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ಕೆಲವು ರಾಜ್ಯಗಳ ಮೇಲೆ ಅಂಫನ್ ಚಂಡಮಾರುತ ಅಪ್ಪಳಿಸುವ ಆತಂಕ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಬೆಳಗ್ಗೆ ದೆಹಲಿಯಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಕೋವಿಡ್-19 ವೈರಸ್‍ನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವುದು ಮತ್ತು ಸೂಪರ್ ಸೈಕ್ಲೋನ್‍ನಿಂದ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟುವ ಸಂಬಂಧ ಪ್ರಧಾನಿ ಸಂಪುಟ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿ ಸಲಹೆ ಮತ್ತು ಅಭಿಪ್ರಾಯಗಳನ್ನುಪಡೆದರು.
ದೇಶಾದ್ಯಂತ ಕೊರೊನಾ ಹಾವಳಿ ತೀವ್ರವಾಗಿದ್ದು, 3000ಕ್ಕೂ ಹೆಚ್ಚು ಮಂದಿ ಬಲಿಯಾಗಿ 1.7 ಲಕ್ಷ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಮ್ಮಾರಿಯನ್ನು ಶತಾಯಗತಾಯ ನಿಗ್ರಹಿಸಿ ಹಾವಳಿಯನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವ ಬಗ್ಗೆ ತ್ವರಿತ ಕಾರ್ಯತಂತ್ರ ರೂಪಿಸಲು ಪ್ರಧಾನಿ ಸಲಹೆ ನೀಡಿದ್ದಾರೆ.
ಅಂತೆಯೇ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ಕರಾವಳಿ ತೀರಗಳ ಮೇಲೆ ಇಂದು ಸಂಜೆ ಅಪ್ಪಳಿಸುವ ವಿನಾಶಕಾರಿ ಅಂಫನ್ ಚಂಡಮಾರುತದ ರೌದ್ರವತಾರವನ್ನು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಸಚಿವಾಲಯಗಳಿಗೆ ಪ್ರಧಾನಿ ಸೂಚನೆ ನೀಡಿದ್ದಾರೆ.