ಬೆಂಗಳೂರು, ಮೇ 25- ನಿನ್ನೆ ಭಾನುವಾರ ಸಂಪೂರ್ಣ ಲಾಕ್‍ಡೌನ್ ಮಾಡಿದ ಪರಿಣಾಮ ಕೊರೊನಾ ಸೋಂಕಿತರ ಪ್ರಮಾಣ ತಗ್ಗಿದೆ. ಆದರೆ, ಇದುವರೆಗೂ ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ರಾಮನಗರಕ್ಕೆ ತಮಿಳುನಾಡು ನಂಜು ತಗುಲಿದ್ದು, 2 ವರ್ಷದ ಮಗುವಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕೋವಿಡ್-19ನಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಇಂದು 69 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ.ಇಂದು ಒಂದೇ ದಿನ 26 ಮಂದಿ ರೋಗದಿಂದ ಗುಣಮುಖವಾಗುವುದರ ಮೂಲಕ ಸೋಂಕಿನಿಂದ ಗುಣಮುಖವಾಗಿರುವವರ ಸಂಖ್ಯೆ 680ಕ್ಕೆ ಏರಿಕೆಯಾಗಿದೆ
ನ್ನೆ ಸಂಜೆ 5 ಗಂಟೆಯಿಂದ ಬೆಳಗ್ಗೆ 12 ಗಂಟೆವರೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಉಡುಪಿ 16, ಬೆಂಗಳೂರು 6, ಮಂಡ್ಯ 2, ಬೆಳಗಾವಿ 1, ದಕ್ಷಿಣ ಕನ್ನಡ 3, ಯಾದಗಿರಿ 15, ಕೋಲಾರ 2, ತುಮಕೂರು 1, ವಿಜಯಪುರ 1, ಬೀದರ್ 1, ಕಲಬುರಗಿ 14, ಬಳ್ಳಾರಿ 3, ಧಾರವಾಡ 3, ರಾಮನಗರ 1 ಸೇರಿದಂತೆ 69 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತರಲ್ಲಿ 52 ಮಂದಿ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದು, 3 ಮಂದಿ ವಿದೇಶದಿಂದ ವಾಪಸಾದವರಾಗಿದ್ದಾರೆ. ಮತ್ತೊಬ್ಬರು ತಮಿಳುನಾಡಿನಿಂದ ಬಂದವರಾಗಿದ್ದಾರೆ. ಇವರಲ್ಲಿ 9 ಮಂದಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದವರಲ್ಲಿ ಸೋಂಕಿತರ ಸಂಪರ್ಕದಿಂದ ರೋಗ ತಗುಲಿದೆ.
ಬೆಂಗಳೂರು ನಗರದ ಇಬ್ಬರು ಮಹಿಳೆಯರು ಹಾಗೂ ಒಬ್ಬ ವ್ಯಕ್ತಿಗೆ ರೋಗಿ ನಂ.1930ರ ಸಂಪರ್ಕದಿಂದ ಸೋಂಕು ತಗುಲಿದೆ. 30 ವರ್ಷದ ಮಹಿಳೆ ಕಂಟೈನ್ಮೆಂಟ್ ಝೋನ್‍ಗೆ ಹೋಗಿ ಬಂದಿದ್ದರಿಂದ ರೋಗ ಅಂಟಿಕೊಂಡಿದೆ. ಮತ್ತೊಬ್ಬ 50 ವರ್ಷದ ಮಹಿಳೆ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ. ಯುಕೆಯಿಂದ ಪ್ರಯಾಣ ಮಾಡಿದ 25 ವರ್ಷದ ವ್ಯಕ್ತಿಗೂ ಕೂಡ ಕೊರೊನಾ ಸೋಂಕು ಹರಡಿದೆ.
ಉಡುಪಿಯಲ್ಲಿ ಕಂಡುಬಂದಿರುವ 16 ಮಂದಿ ಕೊರೊನಾ ಸೋಂಕಿತರಲ್ಲಿ 14 ಮಂದಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹಿಂದಿರುಗಿದವರಾಗಿದ್ದಾರೆ. ಉಳಿದ ಇಬ್ಬರು ದುಬೈನಿಂದ ಬಂದವರಾಗಿದ್ದಾರೆ.ರಾಮನಗರದಲ್ಲಿ 2 ವರ್ಷದ ಮಗುವಿಗೆ ಕೊರೊನಾ ಕಂಡುಬಂದಿದ್ದು, ತಮಿಳುನಾಡಿನಿಂದ ರಾಜ್ಯಕ್ಕೆ ಹಿಂದಿರುಗಿದವರಾಗಿದ್ದಾರೆ.
ಅದೇ ರೀತಿ ತುಮಕೂರಿನಲ್ಲಿ 34 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದ್ದು, ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.ಬೀದರ್‍ನಲ್ಲಿ 40 ವರ್ಷದ ವ್ಯಕ್ತಿ ಮಸ್ಕತ್‍ನಿಂದ ಹಿಂದಿರುಗಿದ್ದು, ಅವರಲ್ಲಿ ಸೋಂಕು ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾದಗಿರಿಯಲ್ಲಿ 15 ಜನರಲ್ಲಿ ಸೋಂಕು ಕಂಡುಬಂದಿದ್ದು, ಎಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರೇ ಆಗಿದ್ದಾರೆ.
ಕಲಬುರಗಿಯಲ್ಲಿ 14 ಜನರಲ್ಲಿ ಕಂಡುಬಂದಿರುವ ಕೊರೊನಾ ಪಾಸಿಟಿವ್‍ಗೆ ಮಹಾರಾಷ್ಟ್ರದ ಸಂಪರ್ಕ ಇದೆ.
ಅದೇ ರೀತಿ ದಕ್ಷಿಣ ಕನ್ನಡದ 3 ಮಂದಿಯೂ ಕೂಡ ಮಹಾರಾಷ್ಟ್ರದಿಂದ ಹಿಂದಿರುಗಿದವರೇ ಆಗಿದ್ದಾರೆ. ಕೋಲಾರದ 60 ವರ್ಷದ ವ್ಯಕ್ತಿಗೆ 1963ರ ಸಂಪರ್ಕದಿಂದ ರೋಗ ಅಂಟಿಕೊಂಡಿದೆ