ಬೆಳಗಾವಿ: ಬೈಲಹೊಂಗಲದಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಸತ್ಯಕ್ಕೆ ದೂರುವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸ್ಪಷ್ಟ ಪಡಿಸಿದ್ದಾರೆ.
ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ಆ ಭಾಗದ ವರದಿ ನೆಗೆಟಿವ್ ಬಂದಿರುವುದರಿಂದ ಜನರು ಆತಂಕಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
144 ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್!!
ಈಗಾಗಲೇ 144 ಕಲಂ ಮೇರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು ಅಥವಾ ಒಟ್ಟಾಗಿ ಸಂಚರಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಒಂದು ವೇಳೆ 144 ಕಲಂ ಆದೇಶ ಉಲ್ಲಂಘಿಸುವುದು ಕಂಡುಬಂದರೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ 229 ಜನರು ವಿದೇಶದಿಂದ ಆಗಮಿಸಿದ್ದಾರೆ. ಇದರಲ್ಲಿ 198 ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. 34 ಜನರು 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. ಇಬ್ಬರು ಐಸೋಲೇಷನ್ ವಾರ್ಡ ನಲ್ಲಿದ್ದು, ಗಂಟಲು ದ್ರವ ಮಾದರಿ ಕಳಿಸಲಾದ ವ್ಯಕ್ತಿಗಳು ಆರೋಗ್ಯವಾಗಿದ್ದಾರೆ. ಬಿಮ್ಸ್ 80 ಹಾಗು ಕೆ.ಎಲ್.ಇ 60 ಜನರ ಕ್ವಾರಂಟೈನ್ ಗೆ ಅವಕಾಶವಿದೆ. ಇದಲ್ಲದೇ ವಸತಿ ನಿಲಯ ಹಾಗೂ ಖಾಸಗಿ ಹೋಟೆಲ್ ಸೇರಿದಂತೆ ಸುಮಾರು 500 ಹಾಸಿಗೆಗಳನ್ನು ಕ್ವಾರಂಟೈನ್ ಗೆ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅದೇ ರೀತಿ ಜಿಲ್ಲೆಯಲ್ಲಿ ಸರ್ಕಾರ ಹೊಸ ನಿಬಂಧನೆಗಳನ್ನು ಪಾಲಿಸಲು ಕ್ರಮಕೈಗೊಳ್ಳಲಾಗಿದೆ. ಅತ್ಯಾವಶ್ಯಕ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಜನರ ಸಂಚಾರಕ್ಕೆ ನಿರ್ಬಂಧವಿಲ್ಲ. ಆದರೆ ಐದಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರಲು ನಿರ್ಬಂಧವಿದೆ. ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಮತ್ತಷ್ಟು ಬಿಗಿಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.