ಯಶವಂತಪುರ ರೈಲ್ವೇ ನಿಲ್ದಾಣದ ನೀಲಿ ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ – ವೇಲ್ ನಿಂದ ಕುತ್ತಿಗೆ ಬಿಗಿದು ಮಹಿಳೆ ಕೊಲೆ – ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ.
ನೀಲಿ ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ವೇಲ್ ನಿಂದ ಮಹಿಳೆ ಕುತ್ತಿಗೆ ಬಿಗಿದು ಕೊಲೆ
ಬೆಂಗಳೂರು: ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ನೀಲಿ ಡ್ರಮ್ ನಲ್ಲಿ ಅಪರಿಚಿತ ಮಹಿಳೆ ಶವ ದೊರೆತ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿರುವ ರೈಲ್ವೇ ಪೊಲೀಸರು ವೇಲ್ ನಿಂದ ಮಹಿಳೆ ಕುತ್ತಿಗೆ ಬಿಗಿದು ಹಂತಕರು ಕೊಲೆ ಮಾಡಿರುವ ಬಗ್ಗೆ ಪೋಸ್ಟ್ ಮಾರ್ಟಮ್ ವರದಿಯಿಂದ ತಿಳಿದುಕೊಂಡಿದ್ದಾರೆ.
ದಿನಕ್ಕೆ ಲಕ್ಷಾಂತರ ಪ್ರಯಾಣಿಕರು ಓಡಾಡುವ ಯಶವಂತಪುರ ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್ -1 ರಲ್ಲಿ ನೀಲಿ ಬಣ್ಣದ ಡ್ರಮ್ ನಲ್ಲಿ ಬಟ್ಟೆ ರಾಶಿಯೊಂದಿಗೆ ಅಪರಿಚಿತ ಮಹಿಳೆ ಶವ ಬುಧವಾರ ಪತ್ತೆಯಾಗಿತ್ತು. ರಕ್ತಸಿಕ್ತವಾಗಿ ಸಿಕ್ಕ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಶವ ಪರೀಕ್ಷೆ ನಡೆಸಿದ ವೈದ್ಯರು ರೈಲ್ವೇ ಪೊಲೀಸರಿಗೆ ವರದಿ ನೀಡಿದ್ದಾರೆ. ಕುತ್ತಿಗೆಯಿಂದ ಬಿಗಿದು ಮಹಿಳೆಯನ್ನು ಕೊಲೆ ಮಾಡಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೃತ ಮಹಿಳೆಯನ್ನು ಉತ್ತರ ಭಾರತ ಮೂಲದವರು ಎಂದು ಹೇಳಲಾಗುತ್ತಿದೆ. ರೈಲ್ವೇ ನಿಲ್ದಾಣ ಒಳ ಹಾಗೂ ಹೊರಗೆ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಡಿಸೆಂಬರ್ 26ರಿಂದಲೂ ನೀಲಿ ಡ್ರಮ್ ಇರುವುದು ಗೊತ್ತಾಗಿದೆ. ಡಿಸೆಂಬರ್ 24 ಅಥವಾ 25 ರಂದು ಕೊಲೆ ಮಾಡಿ ಆರೋಪಿಗಳು ಡ್ರಮ್ ಇಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಯಶವಂತಪುರ ರೈಲು ನಿಲ್ದಾಣದಲ್ಲಿ ನೀಲಿ ಡ್ರಮ್ ಗಳಲ್ಲಿ ಹೆಚ್ಚಾಗಿ ಮೀನು ಸಾಗಾಟ ಮಾಡುತ್ತಾರೆ. ಹಾಗಾಗಿ ಆ ಡ್ರಮ್ ಬಗ್ಗೆ ರೈಲ್ವೇ ಸಿಬ್ಬಂದಿ ತಲೆಕೆಡಿಸಿಕೊಂಡಿರಲಿಲ್ಲ. ಸದ್ಯ ದಾಖಲಾಗಿರುವ ಎಲ್ಲಾ ನಾಪತ್ತೆ ದೂರುಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ರೈಲ್ವೇ ಎಸ್ಪಿ ಸೌಮ್ಯಲತಾ ತಿಳಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ : ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್ ವೊಂದರಲ್ಲಿ ಶವ ಇರಿಸಿ ಮೇಲೆ ಬಟ್ಟೆಗಳನ್ನಿರಿಸಿ ಮುಚ್ಚಳ ಹಾಕಿ ಟೇಪ್ ನಿಂದ ಸುತ್ತಲಾಗಿತ್ತು. ಇಲ್ಲಿ ದುರ್ವಾಸನೆ ಬರಲಾರಂಭಿಸಿದ್ದರಿಂದ ನಿನ್ನೆ ಸ್ವಚ್ಚತಾ ಸಿಬ್ಬಂದಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಬಳಿಕ ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ 25ರಿಂದ 30 ವರ್ಷ ವಯಸ್ಸಿನ ವಿವಾಹಿತ ಮಹಿಳೆಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ರೈಲ್ವೆ ಪೊಲೀಸರು, ಎಫ್ ಎಸ್ ಎಲ್ ತಂಡ ಹಾಗೂ ಶ್ವಾನದಳ ಪರಿಶೀಲನೆ ನಡೆಸಿತ್ತು.