ಶಿವಮೊಗ್ಗ: ಕೊರೊನಾ ಬಂದ ಕಾರಣ ಕೂಲಿ ಕಾರ್ಮಿಕರಿಗೆ ಒಂದೆಡೆ ಕೂಲಿ ಕೆಲಸವಿಲ್ಲ, ಇನ್ನೊಂದೆಡೆ ಕೂಲಿ ಇಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗಿದೆ. ಆದರೆ ಇಂತಹ ಸಮಯದಲ್ಲಿಯೂ ಕೋವಿಡ್-19 ಮುಖ್ಯಮಂತ್ರಿ ಪರಿಹಾರ ನಿಧಿಗೆ 35 ಸಾವಿರ ರೂ. ದೇಣಿಗೆ ನೀಡುವ ಮೂಲಕ ಕೂಲಿ ಕಾರ್ಮಿಕರು ಮಾನವೀಯತೆ ಮೆರೆದಿದ್ದಾರೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿ ಕೆಲಸಗಳು ಆರಂಭವಾಗಿವೆ. ಅದರಂತೆ ಶಿವಮೊಗ್ಗ ಜಿಲ್ಲೆಯ 271 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯುತ್ತಿವೆ. ಹೀಗಾಗಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಇಂದು ಹಾಡೋಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಮಪ್ಪ ಕೆರೆಯ ಹೂಳು ತೆಗೆಯುತ್ತಿರುವ ಕಾಮಗಾರಿ ವೀಕ್ಷಣೆಗೆ ತೆರಳಿದ್ದರು. ಸಚಿವರು ಕಾಮಗಾರಿ ವೀಕ್ಷಣೆಗೆ ತೆರಳಿದ್ದ ವೇಳೆ ಕೂಲಿ ಕಾರ್ಮಿಕರು ಸಚಿವರ ಮೂಲಕ 35 ಸಾವಿರ ರೂ. ಅನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಿದ್ದಾರೆ.
ನಮಗೂ ಸಹ ಕಷ್ಟವಿದೆ. ಆದರೆ ಸರ್ಕಾರ ನಮಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಿದೆ. ಹೀಗಾಗಿ ನಮ್ಮ ಜೀವನ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಆದರೆ ಕೊರೊನಾ ವೇಳೆ ಕೆಲವರು ನಮಗಿಂತಲೂ ಹೆಚ್ಚಿನ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಕಷ್ಟದಲ್ಲಿರುವ ಮಂದಿಗೆ ಸಹಾಯವಾಗಲಿ ಎಂದು ನಮ್ಮ ಕೂಲಿ ಹಣದಲ್ಲಿಯೇ ಸ್ವಲ್ಪ ಹಣವನ್ನು ಪರಿಹಾರ ನಿಧಿಗೆ ಸಲ್ಲಿಸುತ್ತಿದ್ದೇವೆ. ಇದರಿಂದ ನಮಗೂ ಖುಷಿಯಾಗಿದೆ ಎಂದು ಕೂಲಿ ಕಾರ್ಮಿಕರು ಹೇಳಿದ್ದಾರೆ.