ಕೊರೋನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗಡಿ ಭಾಗದಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಲಸಿಕೆ ಕಾರ್ಯಕ್ರಮ ಮುಂದುವರಿದಿದ್ದು, ಫ್ರಂಟ್ ಲೈನ್ ವಾರಿಯರ್ಸ್ ಸೇರಿ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ ಮಾತನಾಡಿ, ಬೇರೆ ಬೇರೆ ದೇಶಗಳಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗಿದೆ. ಈ ಅಲೆ ಮಾರ್ಚ್ ಮಧ್ಯಭಾಗದಿಂದ ಏಪ್ರೀಲ್ ವೇಳೆಗೆ ಕರ್ನಾಟಕಕ್ಕೂ ಕಾಲಿಡುವ ನಿರೀಕ್ಷೆ ಇದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 178 ಲಸಿಕೆ ಕೇಂದ್ರಗಳನ್ನು ತೆರೆಯಲಾಗಿದೆ. 28 ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಮುಂಚೂಣಿ ಕಾರ್ಯಕರ್ತರು, ಅಧಿಕಾರಿಗಳು, ವಯೋವೃದ್ಧರು, 45 ವರ್ಷಕ್ಕೂ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 90 ಸಾವಿರ ಜನರಿಗೆ ಲಸಿಕೆ ನೀಡಲಾಗಿದ್ದು, ಎಲ್ಲೂ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಸುರಕ್ಷತೆ ದೃಷ್ಟಿಯಿಂದ ಎಲ್ಲರೂ ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ ಕಾರ್ಡ್, ವಯಸ್ಸಿನ ಪ್ರಮಾಣ ಪತ್ರ ತೋರಿಸಿ ಲಸಿಕೆ ಪಡೆಯಬಹುದು ಎಂದು ತಿಳಿಸಿದರು.
ಒಟ್ಟಿನಲ್ಲಿ ಕೊರೋನಾ ಅಲೆ ತಡೆಯಲು ಈಗಾಗಲೇ ಚುರುಕಿನ ಕಾರ್ಯಾಚರಣೆ ನಡೆದಿದ್ದು, ಲಸಿಕೆ ಕಾರ್ಯಕ್ರಮವೂ ಚುರುಕಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಮುನ್ಯಾಳ ಮಾಹಿತಿ ನೀಡಿದರು.