ಚಿಕ್ಕೋಡಿ : ತಾಲೂಕಿನ ರೈತರು ಯಾವ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆಂಬ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಿಲ್ಲ. ಒಂದು ವಾರದ ಹಿಂದೆ ಕೇಳಿದ ಮಾಹಿತಿ ಈವರೆಗೆ ತಯಾರಿಸಿಲ್ಲ. ಇದರಿಂದಾಗಿಯೇ ರೈತರು ಹಾಳಾಗುತ್ತಿದ್ದಾರೆಂದು ತೋಟಗಾರಿಕೆ ಇಲಾಖೆ ಅಧಿಕಾರಿ ಎಂ.ಎಸ್.ಹಿಂಡಿಹೊಳಿ ಅವರನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತೀವೃ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಲೋಕೊಪಯೋಗಿ ಇಲಾಖೆ ಸಭಾಭವನದಲ್ಲಿ ಶುಕ್ರವಾರ ನಡೆದ ಕೊರೊನಾ ಮುಂಜಾಗೃತ ಕ್ರಮಗಳ ಕುರಿತಾದ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.
ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸಲು ಸರ್ಕಾರ ಮುಂದಾಗಿದ್ದರೂ ಮಾಹಿತಿ ಕೊರತೆಯಿಂದ ರೈತರು ಬೆಳೆದ ತರಕಾರಿ ಹಾಳಾಗುತ್ತಿದೆ. ಯಾವುದೇ ಪರಿಸ್ಥಿತಿಯಲ್ಲಿ ನನಗೆ ಇಂದು ಸಂಜೆಯೊಳಗೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ನನಗೆ ಒದಗಿಸಬೇಕು ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಪಾಟೀಲರಿಗೆ ಹೇಳಿದರು.
ಖಡಕಲಾಟ ಹಾಗೂ ಪಟ್ಟಣಕುಡಿ, ವಾಳಕಿ ಬಹುಹಂತದ ಕುಡಿಯುವ ನೀರಿನ ಯೋಜನೆಯಿಂದ ಜನರಿಗೆ ಕುಡಿಯುವ ನೀರು ಏಕೆ ನೀಡುತ್ತಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜ ಇಲಾಖೆ ಅಧಿಕಾರಿ ಆನಂದ ಬನಕಾರ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಕುಡಿ ಮತ್ತು ವಾಳಕಿ ಗ್ರಾಮಗಳಿಗೆ ಹತ್ತು ದಿನಗಳ ಕಾಲ ನೀರು ಬುರುತ್ತಿಲ್ಲ. ನೀವು ಕೇವಲ ಕಥೆ ಹೇಳಿ ಸುಳ್ಳನ್ನು ಮರೆ ಮಾಚುವ ಕೆಲಸ ಮಾಡಬೇಡಿ ಎಂದರು.
ಹೇಸ್ಕಾಂ ಇಲಾಖೆಯವರು ವಿದ್ಯುತ್ ಪರಿಕರ(ಟಿಸಿ) ಸರಬರಾಜ ಮಾಡುವಲ್ಲಿ ಇಲಾಖೆ ರೈತರಿಗೆ ಸುಮ್ಮನೆ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರೈತರಿಗೆ ಇಂತಹ ಸಂದಿಗ್ದ ಸ್ಥಿತಿಯಲ್ಲಿ ಅವರ ನೆರವಿಗೆ ಬರುವಂತೆ ಹೇಸ್ಕಾಂ ಅಧಿಕಾರಿ ರಮೇಶ ಶಿಡ್ಲಾಳೆ ಅವರಿಗೆ ಸೂಚನೆ ನೀಡಿದರು.
ನಾಯಿಂಗ್ಲಜ್ ಗ್ರಾಮದಲ್ಲಿ ಕಳ್ಳ ಭಟ್ಟಿ ಸಾರಾಯಿ ಭರಾಟೆ ಜೋರಾಗಿದೆ. ಆದ್ದರಿಂದ ಕಳ್ಳಭಟ್ಟಿ ಸಾರಾಯಿ ತಯಾರಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಸೀಲ್ದಾರ ಎಸ್.ಎಸ್.ಸಂಪಗಾಂವಿ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಪಾಟೀಲ, ಡಿವೈಎಸ್ಪಿ ಮನೋಜ ನಾಯಿಕ, ಮಂಜುನಾಥ ಜನಮಟ್ಟಿ, ಡಾ.ಸುಂದರ ರೋಗಿ, ದೀಪಾ ಕಾಳೆ, ಡಾ.ವಿಠ್ಠಲ್ ಶಿಂದೆ, ಆರ್.ಆರ್.ಪಾಟೀಲ, ಡಾ. ಸದಾಶಿವ ಉಪ್ಪಾರ, ಬಿ.ಎ.ಮೆಕಣಮರಡಿ, ಸಿ.ಎ.ಪಾಟೀಲ ಮುಂತಾದವರು ಉಪಸ್ಥಿತರಿದ್ದರು