ಚಿಕ್ಕಬಳ್ಳಾಪುರ: ನಗರದ 17 ನೇ ವಾರ್ಡಿನಲ್ಲಿ ಇಂದು ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. 40 ವರ್ಷದ ಮಹಿಳೆಗೆ ಕೊರೊನಾ ಸೋಂಕು ಧೃಡವಾಗಿದೆ.
17ನೇ ವಾರ್ಡಿನ ಪಿ-250ರ 65 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಬಲಿಯಾಗಿದ್ದ. ತದನಂತರ ಈತನ ಮಗ ಹಾಗೂ ಮತ್ತಿಬ್ಬರಿಗೆ ಕೊರೊನಾ ಸೋಂಕು ಧೃಡವಾಗಿತ್ತು. ಇದಾದ ನಂತರ ಈ ಮೃತ ವೃದ್ಧ ದಿನಸಿ ಕಿಟ್ ವಿತರಣೆ ಮಾಡಿದ್ದ ಹಿನ್ನೆಲೆ ಇದೇ ಏರಿಯಾ ದಲ್ಲಿ ದಿನಸಿ ಪಡೆದ ಕುಟುಂಬಗಳ 400ಕ್ಕೂ ಹೆಚ್ಚು ಮಂದಿಯನ್ನು ಸ್ವಾಬ್ ಟೆಸ್ಟ್ ಗೆ ನೀಡಲಾಗಿತ್ತು.
ಸದ್ಯ ಓರ್ವ ಮಹಿಳೆಗೆ ಕೊರೊನಾ ಇರುವುದು ದೃಢವಾಗಿದ್ದ ಕಾರಣ ಇಡೀ ವಾರ್ಡ್ ಸೀಲ್‍ಡೌನ್ ಮಾಡಲಾಗಿತ್ತು. ಈ ಏರಿಯಾದಲ್ಲಿ ವಯಸ್ಸಾದವರು ಹಾಗೂ ಸಕ್ಕರೆ ಖಾಯಿಲೆ, ಬಿ ಪಿ ಯಿಂದ ಬಳಲುತ್ತಿದ್ದವರಿಗೆ ರ್‍ಯಾಂಡಮ್ ಟೆಸ್ಟ್ ಮಾಡಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19 ಆಗಿದ್ದು, ಆಕ್ಟೀವ್ ಪ್ರಕರಣಗಳ ಸಂಖ್ಯೆ 06ಕ್ಕೆ ಏರಿದೆ.
ಮಹಿಳೆ ಕೊರೊನಾ ಸೋಂಕಿತ ಮೃತ ವೃದ್ಧನಿಂದ ದಿನಸಿ ಸಹ ಪಡೆದಿಲ್ಲ. ಅವರ ಮನೆಗೂ ಇವರ ಮನೆಗೂ 200 ಮೀಟರ್ ಅಂತರವಿದೆ. ಅವರ ಮನೆಯವರಿಗೆ ಇವರ ಮನೆಯವರಿಗೂ ಸಂಪರ್ಕ ಇರಲಿಲ್ಲ. ಆದರೂ ಈಕೆಗೆ ಹೇಗೆ ಸೋಂಕು ಬಂತು ಎಂಬ ಅನುಮಾನ ಮೂಡಿದ್ದು, ಜಿಲ್ಲಾಡಳಿತಕ್ಕೆ ಮತ್ತೆ ತಲೆನೋವು ತಂದಿದೆ. ಮೇ 3ರ ನಂತರ ಸ್ವಲ್ಪ ಸಡಿಲಿಕೆ ಸಿಗಬಹುದು ಎಂದು ಕಾಯುತ್ತಿದ್ದ ಜನರಿಗೆ ಹೊಸ ಪ್ರಕರಣ ಶಾಕ್ ತಂದಿದೆ.