ಚಿತ್ರದುರ್ಗ: ವಿಚ್ಛೇದಿತ ಪತ್ನಿ ಸೇರಿ ಐವರ ಮೇಲೆ ಆ್ಯಸಿಡ್ ದಾಳಿ ಬಳಿಕ ಮಚ್ಚಿನಿಂದ ಹಲ್ಲೆ ನಡೆಸಿ ಪತಿ ಪರಾರಿಯಾಗಿರುವ ಘಟನೆ ಚಿತ್ರದುರ್ಗದ ಮಾಳಪ್ಪನಹಟ್ಟಿಯಲ್ಲಿ ನಡೆದಿದೆ.
ಚಿತ್ರದುರ್ಗದ ನೆಹರು ನಗರದವನಾಗಿರುವ ಆರೋಪಿ ಪತಿ ಸುಹೇಲ್, ಪತ್ನಿ ತಾಸಿನಾ ಬಾನು ಹಾಗೂ ಪುತ್ರಿ ರೋಷನಿ, ಸಹೋದರಿ ನೇಹಾ, ನೇಹಾ ಪುತ್ರಿ ಇಕ್ರಾ, ಹಿರಿಯ ಸಹೋದರಿ ನಗ್ಮಾ ನಾಯ್ಕ್ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಸುಹೇಲ್ ಹಾಗೂ ಪತ್ನಿ ತಾಸಿನಾ ಬಾನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಸುಹೇಲ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ತಾಸಿನಾ ಕೆಲ ತಿಂಗಳ ಹಿಂದಷ್ಟೇ ಬೆಂಗಳೂರು ನಗರ ಸೇರಿದ್ದಳು. ಇದೀಗ ತಾಸಿನಾ ಹಬ್ಬಕ್ಕೆಂದು ಸಹೋದರಿ ಮನೆಗೆ ಬಂದಿದ್ದರು. ಈ ವೇಳೆ ಏಕಾಏಕಿ ಮನೆಗೆ ಬಂದು ಆ್ಯಸಿಡ್ ದಾಳಿ ನಡೆಸಿದ್ದಾನೆ. ಬಳಿಕ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ.
ಮಾಳಪ್ಪನಹಟ್ಟಿಯ ಘಟನಾ ಸ್ಥಳಕ್ಕೆ ಎಸ್ಪಿ ರಂಜಿತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಆಟೋ ಚಾಲಕನಾಗಿರುವ ಸುಹೇಲ್ ಭಾಷಾನಿಂದ ಆ್ಯಸಿಡ್ ದಾಳಿ ನಡೆಸಿದ್ದಾನೆ. ಸದ್ಯ ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಆರೋಪಿ ಬಂಧನಕ್ಕೆ ತಂಡ ರಚಿಸಿದ್ದೇವೆ. ಬಂಧನದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7