ಚಿಕ್ಕೋಡಿ ಉಪವಿಭಾಗಾಧಿಕಾರಿ ವರ್ಗಾವಣೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಜನಪರವಾಗಿರೋದು ಸರ್ಕಾರದ ದೃಷ್ಟಿಯಲ್ಲಿ ತಪ್ಪೇ ಎಂದು ಸರ್ಕಾರವನ್ನು ಪ್ರಶ್ನಿಸಲಾಗುತ್ತಿದೆ.
ಬೆಳಗಾವಿ: ಜನರ ಮನಸ್ಸು ಗೆದ್ದ ಪ್ರಮಾಣಿಕ, ದಕ್ಷ ಆಡಳಿತಗಾರರಾಗಿದ್ದ ಚಿಕ್ಕೋಡಿ ಉಪವಿಭಾಗಾಧಿಕಾರಿ ವರ್ಗಾವಣೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಜನರ ಪರವಾಗಿ ಇರುವುದು ಸರ್ಕಾರದ ದೃಷ್ಟಿಯಲ್ಲಿ ತಪ್ಪೇ ಎಂದು ಸಾಮಾಜಿಕ ಜಾಲತಾಣದಲ್ಲಿ ಚಿಕ್ಕೋಡಿ ಜನರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡರ ದಿಡೀರ್ ವರ್ಗಾವಣೆ ಮಾಡಿರುವ ಸರ್ಕಾರದ ವಿರುದ್ಧ ಜನರು ಪೋಸ್ಟ್ ಆಗುತ್ತಿದ್ದು, ವರ್ಗಾವಣೆ ಮಾಡಿದ ಸರ್ಕಾಕ್ಕೆ ಧಿಕ್ಕಾರ ಎಂದು ಹೇಳಿದ್ದಾರೆ.
ಚಿಕ್ಕೋಡಿ ಎಸಿ ಸಂತೋಷ ಕಾಮಗೌಡರ ಅವರು ಪ್ರಮಾಣಿಕ, ದಕ್ಷ, ಆಡಳಿತ ನಡೆಸಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಆದರೆ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿರುವುದು ಜನರ ಟೀಕೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನೆಟ್ಟಿಗರು ಸರ್ಕಾರಕ್ಕೆ ಧಿಕ್ಕಾರ ಎಂದು ಹೇಳಿದ್ದು, ಹಲವು ಅಭಿವೃದ್ಧಿಪರ ಕೆಲಸ ಮಾಡುತ್ತಿದ್ದವರನ್ನು ಹೀಗೆ ವರ್ಗ ಮಾಡುವುದು ಸರಿಯಲ್ಲ. ಜನಪರವಾಗಿರುವುದು ಸರ್ಕಾರದ ದೃಷ್ಟಿಯಲ್ಲಿ ತಪ್ಪೇ ಎಂದು ಪ್ರಶ್ನೆ ಮಾಡಲಾಗಿದೆ.
ವಾರದ ಪ್ರತಿಯೊಂದು ದಿನ ವೇಳಾಪಪಟ್ಟಿ ಮಾಡಿಕೊಂಡು ಚಾಚು ತಪ್ಪದೆ ಚಿಕ್ಕೋಡಿ ಉಪವಿಭಾಗದ ಪ್ರತಿಯೊಂದು ತಾಲೂಕು ಕಚೇರಿಗಳಿಗೆ ಭೇಟಿ ನೀಡಿ ರೈತರ, ಸಾರ್ವಜನಿಕರ ಸಮಸ್ಯೆಗಳನ್ನು ತಕ್ಷಣ ಪರಿಹರಿಸುತ್ತಿದ್ದ, ಹತ್ತಾರು ವರ್ಷಗಳಿಂದ ಆಗದೆ ಇರುವ ಕೆಲಸಗಳನ್ನು ವಿಲೇವಾರಿ ಮಾಡಿ ದಕ್ಷ, ಪ್ರಾಮಾಣಿಕ ಕೆಲಸ ಮಾಡಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಜನಸಾಮಾನ್ಯರಿಗೆ ತಕ್ಷಣ ಸಿಗುವ ಅಧಿಕಾರಿಯ ದಿಢೀರ್ ವರ್ಗಾವಣೆ ಏಕೆ? ಅಧಿಕಾರಿಗಳ ವರ್ಗಾವಣೆ ಸಾಮಾನ್ಯ, ಆದರೆ ಒಳ್ಳೆಯ ಕಾರ್ಯ ಮಾಡುತ್ತಿರುವವರನ್ನು ದಿಢೀರ್ ವರ್ಗಾವಣೆ ಏಕೆ ಮಾಡಲಾಗಿದೆ ಎಂದು ಪ್ರಶ್ನಿಸಲಾಗುತ್ತಿದೆ.
9 ಐಎಎಸ್ (IAS) ಅಧಿಕಾರಿಗಳಿಗೆ ಸಹಾಯಕ ಆಯುಕ್ತರಾಗಿ ಸ್ಥಳ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ಎಸಿಯಾಗಿ ಅನ್ಮೋಲ್ ಜೈನ್, ಬೀದರ್ ಉಪ ವಿಭಾಗಾಧಿಕಾರಿಯಾಗಿ ಲವಿಶ್ ಓರ್ಡಿಯ, ತುಮಕೂರು ಜಿಲ್ಲೆ ಮಧುಗಿರಿ ಎಸಿಯಾಗಿ ರಿಷಿ ಆನಂದ್, ಮಂಡ್ಯ ಉಪ ವಿಭಾಗಾಧಿಕಾರಿಯಾಗಿ ಹೆಚ್.ಎಸ್.ಕೀರ್ತನಾ, ಮಂಡ್ಯ ಜಿಲ್ಲೆ ಪಾಂಡವಪುರ ಎಸಿಯಾಗಿ ನೊಂಗ್ಜಾಯಿ ಮೊಹಮ್ಮದ್, ಬೆಳಗಾವಿ ಜಿಲ್ಲೆ ಚಿಕ್ಕೋಡಿ ಎಸಿಯಾಗಿ ಗಿಟ್ಟೆಮಾಧವ್ ವಿಠ್ಠಲ್ ರಾವ್, ರಾಯಚೂರು ಜಿಲ್ಲೆ ಲಿಂಗಸೂಗೂರು ಎಸಿಯಾಗಿ ಶಿಂಧೆ ಸಂಜೀವನ್, ಬಳ್ಳಾರಿ ಎಸಿಯಾಗಿ ಎನ್.ಹೇಮಂತ್, ಮೈಸೂರು ಜಿಲ್ಲೆ ಹುಣಸೂರು ಎಸಿಯಾಗಿ ರುಚಿ ಬಿಂದಾಲ್ ವರ್ಗಾವಣೆಯಾಗಿದ್ದರು.