ಚಿಕ್ಕಬಳ್ಳಾಪುರ: ನಿರ್ಮಾಣ ಹಂತದ ಮನೆ ತೆರವು ಮಾಡಲು ಮುಂದಾಗಿದ್ದಕ್ಕೆ ವ್ಯಕ್ತಿಯೋರ್ವ ತಹಶೀಲ್ದಾರ್ ಹೆಸರು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕಿನ ಗಿಡಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾಧಕೃಷ್ಣ ಜಿ ಎಂಬವರು ಆಂಟಿಬಯೊಟಿಕ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಕ್ಕೂ ಮುನ್ನ ರಾಧಾಕೃಷ್ಣ ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ. ತನ್ನ ಸಾವಿಗೆ ಮಂಚೇನಹಳ್ಳಿ ತಹಶೀಲ್ದಾರ್ ಪೂರ್ಣಿಮಾ ಹಾಗೂ ಜಿಲ್ಲಾಡಳಿತ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಸದ್ಯ ರಾಧಾಕೃಷ್ಣ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಧಾಕೃಷ್ಣ ವಿರುದ್ಧ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಸ್ವಂತ ಜಮೀನಿನ ಪಕ್ಕದಲ್ಲೇ ಸರ್ಕಾರಿ ಜಮೀನು ಇದ್ದು, ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಮಂಚೇನಹಳ್ಳಿ ತಹಶೀಲ್ದಾರ್ ಪೂರ್ಣಿಮಾ ಮನೆ ತೆರವು ಮಾಡಲು ಮುಂದಾಗಿದ್ದ ವೇಳೆ ರಾಧಾಕೃಷ್ಣ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Laxmi News 24×7