ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪ್ರಚಾರದ ಕರಪತ್ರ, ಪೋಸ್ಟರ್ ಹಾಗೂ ಕಿರುಹೊತ್ತಿಗೆ ಸೇರಿದಂತೆ ಇತ್ಯಾದಿಗಳನ್ನು ಮುದ್ರಿಸುವ ಪೂರ್ವದಲ್ಲಿ ಮುದ್ರಕರು ನಿಗದಿತ ನಮೂನೆ ಭರ್ತಿ ಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮುದ್ರಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುದ್ರಕರ ಮತ್ತು ಪ್ರಕಾಶಕರ ಹೆಸರನ್ನು ಹೊಂದಿರದ ಯಾವುದೇ ಚುನಾವಣೆಯ ಕಿರುಹೊತ್ತಿಗೆ ಅಥವಾ ಭಿತ್ತಿಪತ್ರಗಳ್ನು ಮುದ್ರಿಸುವಂತಿಲ್ಲ. ಮುದ್ರಣ ಮಾಡಿಸುವವರಿಂದ ನಿಗದಿತ ನಮೂನೆ ಭರ್ತಿ ಮಾಡಿಸಿಕೊಳ್ಳತಕ್ಕದ್ದು. ಪ್ರಕಟಿಸಿದ ಕರಪತ್ರ ಮತ್ತು ನಮೂನೆಯನ್ನು 24 ಗಂಟೆಗಳಲ್ಲಿ ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಚುನಾವಣೆಯಲ್ಲಿ ಅಭ್ಯರ್ಥಿಗಳ, ಪಕ್ಷದ ಖರ್ಚು, ವೆಚ್ಚಗಳ ಮಾಹಿತಿ ಮಹತ್ವದ್ದಾಗಿದ್ದು, ಚುನಾವಣಾ ಆಯೋಗವು ಗರಿಷ್ಠ ₹40 ಲಕ್ಷ ಖರ್ಚು ಮಾಡಲು ಅವಕಾಶ ನೀಡಿದೆ. ಮುದ್ರಕರು ಮುದ್ರಿತ ಪ್ರಕಟಣೆಯಲ್ಲಿ ಮುದ್ರಣ ಸ್ಥಳ, ಎಷ್ಟು ಪ್ರತಿ ಎಂಬುದನ್ನು ಪ್ರಕಟಿಸಬೇಕು. ಅದರ ವೆಚ್ಚವನ್ನು ಚೆಕ್, ಡಿಡಿ ಅಥವಾ ಫೋನ್ಪೇ ಮೂಲಕ ಪಾವತಿ ಮಾಡಿಸಿಕೊಳ್ಳಬೇಕು. ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ ಮಾತನಾಡಿ, ಮುದ್ರಣದ ವಿವರದಲ್ಲಿ ಶಾಂತಿಭಂಗ, ಭದ್ರತೆ, ಧಾರ್ಮಿಕ ನಿಂದನೆ, ವ್ಯಕ್ತಿಗತ ಅವಹೇಳನಕಾರಿ ಹೇಳಿಕೆಗಳು ಇರಬಾರದು. ಪ್ರಿಂಟ್ ಮಾಡುವ ಪೂರ್ವದಲ್ಲಿ ಅದರಲ್ಲಿರುವ ಎಲ್ಲ ವಿಷಯವನ್ನು ಪರಿಶೀಲಿಸಿ, ನಂತರ ಮುದ್ರಣ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕಲ್ಲಿ ಮಾತನಾಡಿ, ನಿಗದಿತ ಅಪೆಂಡಿಕ್ಸ್ ಎ ಮತ್ತು ಬಿ ನಮೂನೆಗಳಲ್ಲಿ ಭರ್ತಿ ಮಾದರಿ ನೀತಿ ಸಂಹಿತೆ ಸಮಿತಿಗೆ ನೀಡಿದಲ್ಲಿ ಪ್ರಚಾರದ ಕರಪತ್ರ, ಪೋಸ್ಟರ್ ಹಾಗೂ ಕಿರುಹೊತ್ತಿಗೆ ಮುದ್ರಣಕ್ಕೆ ಅನುಮತಿ ನೀಡಲಾಗುತ್ತದೆ ಎಂದರು.
ಹುನಗುಂದ ತಹಶೀಲ್ದಾರ್ ಪ್ರದೀಪಕುಮಾರ ಇದ್ದರು.
ಪಚುನಾವಣೆ: ಜಿಲ್ಲೆಗೆ ಸಾಮಾನ್ಯ ವೆಚ್ಚ ವೀಕ್ಷಕರ ಆಗಮನ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಾಮಾನ್ಯ ವೀಕ್ಷಕರನ್ನಾಗಿ ಪಾರುಲ್ ಪಟವಾರಿ ಹಾಗೂ ವೆಚ್ವ ವೀಕ್ಷಕರನ್ನಾಗಿ ಎಂ.ಅಮೀರ್ ಸಿದ್ದಿಕ್ ಅವರನ್ನು ನೇಮಕ ಮಾಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ. ಸಾಮಾನ್ಯ ವೀಕ್ಷಕರು (ಮೊ.ನಂ.95355 06540) ವಿದ್ಯಾಗಿರಿ ನೂತನ ಸರ್ಕಾರಿ ಅತಿಥಿ ಗೃಹದ ನಂ.1 ರಲ್ಲಿ ಲಭ್ಯವಿರುತ್ತಾರೆ. ವೆಚ್ಚ ವೀಕ್ಷಕರು (ಮೊನಂ.7483737767) ಮೊದಲನೇ ಮಹಡಿಯ ಕೊಠಡಿಯಲ್ಲಿ ಲಭ್ಯವಿರುತ್ತಾರೆ. ಸಾರ್ವಜನಿಕರು ರಾಜಕೀಯ ಪಕ್ಷದ ಮುಖಂಡರು ಹಾಗೂ ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ವೀಕ್ಷಕರ ಮೊಬೈಲ್ ನಂಬರ್ಗೆ ಕರೆ ಮಾಡಿ ಅಹವಾಲು ಸಲ್ಲಿಸಬಹುದಾಗಿದೆ.
Laxmi News 24×7