ಬೆಂಗಳೂರು,: ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು, ಚಾಲಕರು, ರೈತರು ಸೇರಿ ಇತರೆ ವರ್ಗದ ಜನರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 1610 ಕೋಟಿ ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಈ ವಿಶೇಷ ಪ್ಯಾಕೇಜ್ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಇದ್ದಂತೆ ಇದು ಎಂದಿದ್ದಾರೆ.
ಸಿಎಂ ಘೋಷಣೆ ಮಾಡಿರುವ ಆರ್ಥಿಕ ನೆರವಿನ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ”ನಾವು ಸರ್ಕಾರಕ್ಕೆ ಒತ್ತಾಯ ಮಾಡಿದ್ದು ಬೇರೆ, ಆದರೆ ಅವರು ಜನರಿಗೆ ನೀಡುತ್ತಿರುವುದು ಬೇರೆ” ಎಂದು ಕಾಲೆಳೆದಿದ್ದಾರೆ.
ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ”ಕೊರೊನಾ ಹಾವಳಿಯಿಂದ ನೊಂದವರಿಗೆ ರೂ.50,000 ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಲು ಸರಣಿ ಮನವಿ ಪತ್ರಗಳ ಮೂಲಕ ಒತ್ತಾಯಿಸಿದ್ದೆ. ಮುಖ್ಯಮಂತ್ರಿ ಅವರು 1,610 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದಾರೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ. ಕೇರಳ ಘೋಷಿರುವುದು ರೂ.20,000 ಕೋಟಿ ಪ್ಯಾಕೇಜ್, ನೆನಪಿರಲಿ” ಎಂದು ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.