ಬೆಂಗಳೂರು : ವಿದ್ಯಾರ್ಥಿಗಳ ಹಾಜರಾತಿಯ ಕೊರತೆ ಎದುರಿಸುತ್ತಿರುವ ಮೂರು ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡಗಳನ್ನು ಹತ್ತಿರದ ವಿಶ್ವವಿದ್ಯಾಲಯಗಳಿಗೆ ಹಸ್ತಾಂತರಿಸಿದ್ದು, ಅಲ್ಲಿ ವಿಶ್ವವಿದ್ಯಾಲಯಗಳೇ ಕಾಲೇಜುಗಳನ್ನು ತೆರೆಯಲಿವೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸೇರಿಸಿ ಅವುಗಳನ್ನು ಘಟಕ ಕಾಲೇಜುಗಳನ್ನಾಗಿ ಮರು ರೂಪಿಸಲಾಗುವುದು. ಸ್ಥಳೀಯವಾಗಿ ಬೇಡಿಕೆ ಇರುವ ಕೋರ್ಸ್‌ಗಳನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯಗಳೇ ಆರಂಭಿಸಲಿವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಭೂ ವಿಲೇವಾರಿ ಅಧಿಕಾರ ಇಲ್ಲ:
ಈ ಕಾಲೇಜುಗಳ ಪೀಠೋಪಕರಣ, ಜಮೀನು, ಕಟ್ಟಡಗಳನ್ನು ಆಯಾಯ ವಿವಿಗೆ ವರ್ಗಾಯಿಸಲಾಗುತ್ತಿದ್ದು, ಆದರೆ ಕಟ್ಟಡ ಅಥವಾ ಭೂಮಿಯನ್ನು ಮಾರಾಟ ಮಾಡುವ, ಗುತ್ತಿಗೆ ನೀಡುವ ಅಥವಾ ವಿನಿಮಯ ಮಾಡುವ ಯಾವ ಅಧಿಕಾರವೂ ಮೈಸೂರು ಮತ್ತು ದಾವಣಗೆರೆ ವಿವಿಗಳಿಗೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಆದರೆ, ಸ್ಥಳಾಂತರಗೊಳ್ಳುವ ಈ ಮೂರು ಕಾಲೇಜುಗಳ ಸಿಬ್ಬಂದಿಯನ್ನು ಹತ್ತಿರದ ಬೇರೆ ಕಾಲೇಜುಗಳಿಗೆ ನಿಯೋಜನೆ ಮಾಡಲಾಗುವುದು ಎಂದರು. ಈ ಹಿಂದೆ ತೀರ್ಮಾನ ಮಾಡಿದಂತೆ ತೆರಕಣಾಂಬಿ ಕಾಲೇಜನ್ನು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಾರೂಗೇರಿಗೆ; ಹೆತ್ತೂರು ಕಾಲೇಜುನ್ನು ಬೆಂಗಳೂರು ನಗರದ ಹೆಬ್ಬಾಳಕ್ಕೆ ಹಾಗೂ ತುರುವನೂರು ಕಾಲೇಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದರು.