ಬೆಂಗಳೂರು : ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಬಿಬಿಎಂಪಿ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದ್ದು, ಈ ಸಂಬಂಧ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗುವುದು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಿನ ಪಾಲಿಕೆಯ 198 ವಾರ್ಡ್‌ಗಳನ್ನು 225ಕ್ಕೆ ಹೆಚ್ಚಳ ಮಾಡುವುದರ ಹಿಂದೆ ಪಾಲಿಕೆ ಚುನಾವಣೆ ಮುಂದೂಡುವ ಉದ್ದೇಶ ಅಡಗಿದೆ. 2007ರಲ್ಲಿಯೂ ಅಂದಿನ ಬಿಜೆಪಿ ಸರ್ಕಾರ ಬಿಬಿಎಂಪಿಗೆ 110 ಹಳ್ಳಿಗಳನ್ನು ಸೇರಿಸುವ ನೆಪದಲ್ಲಿ ಪಾಲಿಕೆ ಚುನಾವಣೆಯನ್ನು ಮುಂದೂಡಿತ್ತು. ಸರ್ಕಾರಕ್ಕೆ ಸ್ಥಳೀಯ ಪಾಲಿಕೆ ಸದಸ್ಯರು ಅಧಿಕಾರ ನಡೆಸುವುದು ಬೇಕಿಲ್ಲ ಅನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಪಾಲಿಕೆ ವ್ಯಾಪ್ತಿಗೆ ಸೇರಿಸಿರುವ 110 ಹಳ್ಳಿಗಳಿಗೆ ಪಾಲಿಕೆ ಸಮರ್ಪಕವಾಗಿ ಮೂಲಸೌಕರ್ಯ ಒದಗಿಸಿಲ್ಲ.
ಹಳ್ಳಿಗಳ ಅಭಿವೃದ್ಧಿ ಸಾಧ್ಯವಾಗಿಲ್ಲ. ಹಳೆಯ ಬೆಂಗಳೂರು ಪ್ರದೇಶದಲ್ಲಿಯೇ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳಿವೆ. ಇದೀಗ ಪಾಲಿಕೆಗೆ 60 ಹೊಸ ಹಳ್ಳಿಗಳ ಸೇರ್ಪಡೆಗೆ ಸರ್ಕಾರ ಮುಂದಾಗಿದೆ. ಇದಕ್ಕೆ ಮೊದಲು 110 ಹಳ್ಳಿಗಳ ವಾಸ್ತವ ಸ್ಥಿತಿ ಏನಿದೆ ಎಂಬುದನ್ನು ಸರ್ಕಾರ ನೋಡಬೇಕು.ಸ್ವಾರ್ಥಕ್ಕಾಗಿ ಹಳ್ಳಿಗಳನ್ನು ಬಳಸಿಕೊಳ್ಳಬಾರದು ಎಂದು ಹೇಳಿದರು.
ಕಾಂಗ್ರೆಸ್, ಜೆಡಿಎಸ್, ಪಕ್ಷೇತರರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಭರ್ಜರಿ ಪ್ಲಾನ್..!
ಕೋರ್ಟ್‌ಗೆ ಮನವಿ
ಪಾಲಿಕೆ ಚುನಾವಣೆ ಸಂಬಂಧ ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದೆ. ಇದೀಗ ಸರ್ಕಾರ ಉದ್ದೇಶ ಪೂರ್ವಕವಾಗಿ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿರುವುದರಿಂದ ನಾವು ಸಹ ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಅಬ್ದುಲ್ ವಾಜೀದ್ ತಿಳಿಸಿದರು.