ಬಳ್ಳಾರಿ: ಕೊರೊನಾ ಸೋಂಕಿತ ಮೃತದೇಹವನ್ನು ಮಳೆಯಲ್ಲೇ ನೆನೆಯಲು ಬಿಟ್ಟು ಬಳ್ಳಾರಿ ಜಿಲ್ಲೆಯ ಆರೋಗ್ಯ ಇಲಾಖೆ ಮತ್ತೊಮ್ಮೆ ಅಮಾನವೀಯವಾಗಿ ನಡೆದುಕೊಂಡಿದೆ.
ಬುಧವಾರ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಆರು ಜನರು ಸಾವನ್ನಪ್ಪಿದ್ದರು. ಇದರಲ್ಲಿ ಹೊಸಪೇಟೆ ತಾಲೂಕು ಆಸ್ಪತ್ರೆಯಲ್ಲೂ ಓರ್ವ ಸೋಂಕಿತ ಮೃತಪಟ್ಟಿದ್ದರು. ಈ ವೇಳೆ ಆತನ ಶವವನ್ನು ಆಸ್ಪತ್ರೆಯ ಆವರಣದಲ್ಲಿ ನೆನೆಯಲು ಬಿಟ್ಟು ಆಸ್ಪತ್ರೆಯ ವೈದ್ಯರ ಮತ್ತೊಂದು ಎಡವಟ್ಟು ,
ಈ ಆಸ್ಪತ್ರೆಗೆ ಪ್ರತಿನಿತ್ಯ ಗರ್ಭಿಣಿಯರು ಸೇರಿದಂತೆ ಅನೇಕರು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಹೀಗಾಗಿ ಈ ಸಮಯದಲ್ಲಿ ಕೊರೊನಾ ಸೋಂಕಿತ ಮೃತದೇಹವನ್ನು ಈ ರೀತಿ ಮಳೆಯಲ್ಲಿ ನೆನೆಯಲು ಬಿಟ್ಟಿದ್ದಕ್ಕೆ ಸ್ಥಳೀಯವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೃತ ಪಟ್ಟು ಎರಡು ಗಂಟೆಗಳಾದರೂ ಮಳೆಯಲ್ಲೇ ಶವವನ್ನು ನೆನೆಯಲು ಬಿಟ್ಟ ಸಿಬ್ಬಂದಿ ನಂತರ ಶವಕ್ಕೆ ಪಿಪಿಇ ಕಿಟ್ ಹಾಕಿ ಮುಚ್ಚಿದ್ದಾರೆ.
ವೈದ್ಯರ ಮತ್ತು ಆಸ್ಪತ್ರೆಯ ಸಿಬ್ಬಂದಿಯ ಈ ನಿರ್ಲಕ್ಷ್ಯಕ್ಕೆ ಸ್ಥಳೀಯ ಆಟೋ ಚಾಲಕರು ಕಿಡಿಕಾರಿದ್ದು, ವಿಡಿಯೋ ಮಾಡಿ ಕೊರೊನಾ ವೈರಸ್ ಪರೀಕ್ಷಾ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಸಚಿವ ಆನಂದ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ಇಲ್ಲಿಗೆ ಬಡವರು, ಗರ್ಭಿಣಿಯರು ಚಿಕಿತ್ಸೆಗೆ ಬರುತ್ತಾರೆ ಇಲ್ಲಿ ಕೊರೊನಾ ಘಟಕ ಇರುವುದು ಬೇಡ ಬೇರೆ ಕಡೆ ಶಿಫ್ಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಮೃತಪಟ್ಟವರ ಮೃತದೇಹವನ್ನು ಗುಂಡಿಯೊಳಗೆ ಎಸೆದು, ಒಂದೇ ಗುಂಡಿಯಲ್ಲಿ ಎರಡು ಮೃತದೇಹವನ್ನು ಮುಚ್ಚಿ ಅಮಾನವೀಯವಾಗಿ ನಡೆದುಕೊಂಡಿದ್ದ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಜೊತೆಗೆ ಈ ವಿಚಾರವಾಗಿ ಬಳ್ಳಾರಿ ಜಿಲ್ಲೆಯ ಡಿಸಿಯವರು ಬಹಿರಂಗವಾಗಿ ಕ್ಷಮೆ ಕೇಳಿದ್ದರು.