ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭಾರೀ ಮಳೆಯಾಗಿದೆ. ಮಳೆಯ ಜೊತೆ ಗಾಳಿ, ಮಿಂಚು, ಗುಡುಗು ಸಹ ಬಂದಿದ್ದರಿಂದ ವಾಹನ ಸಂಚರಕ್ಕೆ ಹಲವೆಡೆ ಅಡ್ಡಿ ಆಗಿತ್ತು.
ಬೆಳಗ್ಗೆ ಸುಮಾರು 5 ಗಂಟೆಯಿಂದ ಆರಂಭವಾದ ಮಳೆ ಸುಮಾರು 2 ಗಂಟೆಗಳ ಕಾಲ ಜೋರಾಗಿಯೇ ಸುರಿದಿದೆ. ಬೆಳಗ್ಗೆ 7 ಗಂಟೆಯಾದರೂ ನಿಲ್ಲುವ ಸೂಚನೆ ಕಾಣುತ್ತಿಲ್ಲ. ನಗರದ ಎಲ್ಲ ಫ್ಲೈ ಓವರ್ ಗಳನ್ನು ಮುಚ್ಚಿದ ಪರಿಣಾಮ ಸರ್ವಿಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಕಾರು ಚಾಲಕರು ಮತ್ತು ಬೈಕ್ ಸವಾರರಿಗೆ ಸಮಸ್ಯೆಯಾಗಿತ್ತು.ಸರ್ವಿಸ್ ರಸ್ತೆಯ ಇಳಿಜಾರು ಪ್ರದೇಶದಲ್ಲಿ ನೀರು ಪ್ರವಾಹದಂತೆ ಬರುತ್ತಿದ್ದ ಪರಿಣಾಮ ಬೈಕ್ ಸವಾರರು ಹೈರಾಣಾಗಿ ಹೋಗಿದ್ದರು. ಕೊರೊನಾ ನಿಯಂತ್ರಿಸಲು ಕಡಿಮೆ ಸಂಖ್ಯೆಯಲ್ಲಿ ವಾಹನಗಳು ಇದ್ದ ಕಾರಣ ಟ್ರಾಫಿಕ್ ಸಮಸ್ಯೆ ಆಗಲಿಲ್ಲ.ಕೆಲವು ಪ್ರದೇಶಗಳಲ್ಲಿ ಮಂಡಿ ಉದ್ದಕ್ಕೂ ನೀರು ನಿಂತಿತ್ತು. ಕೆಂಗೇರಿ ನೈಸ್ ರೋಡ್ ಜಂಕ್ಷನ್ ಬಳಿ ರಸ್ತೆಗೆ ನೀರು ನುಗ್ಗಿದ್ದು ಕೆರೆಯಂತಾಗಿತ್ತು. ಕರ್ನಾಟಕ ನೈಸರ್ಗಿಕ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಮಾಹಿತಿ ನೀಡಿತ್ತು. ಬೆಂಗಳೂರು ಅಲ್ಲದೇ ರಾಮನಗರ, ಕೋಲಾರದಲ್ಲೂ ಭಾರೀ ಮಳೆಯಾಗಿದೆ.
ಮಳೆಯನ್ನು ಹಲವು ಮಂದಿ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಪರಿಣಾಮ ಬೆಳಗ್ಗೆಯೇ ಬೆಂಗಳೂರು ಮಳೆ ಭಾರತದಲ್ಲೇ ಟ್ರೆಂಡಿಂಗ್ ಆಗುತ್ತಿದೆ.