ಬೆಂಗಳೂರು: ಡೆಡ್ಲಿ ಕೊರೊನಾ ಮಧ್ಯೆ ಇದೀಗ ರಾಜ್ಯದಲ್ಲಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.
ಕೇರಳದ ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮೇ 17ರೊಳಗೆ ಆಮ್‍ಫಾನ್ ಚಂಡಮಾರುತದಿಂದ ಭಾರೀ ಮಳೆಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 15 ಮತ್ತು 16ರಂದು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮೇ 18ರಂದು ಈ ಆಮ್‍ಫಾನ್ ಚಂಡಮಾರುತದ ಅಬ್ಬರ ಹೆಚ್ಚಾಗಲಿದ್ದು, ಒಂದು ಗಂಟೆಗೆ 172 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಅಲ್ಲದೆ ಬಂಗಾಳಕೊಲ್ಲಿಯಲ್ಲಿ ಮೇ 15ರಂದು ಪ್ರತಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಕೇರಳಕ್ಕೆ ಇದರ ನೇರ ಪರಿಣಾಮ ಬೀರುವುದಿಲ್ಲ. ಆದರೆ ಮೇ 17ರಂದು ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ಒಟ್ಟು 13 ದೇಶಗಳಿಗೆ ಈ ಚಂಡಮಾರುತ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೇ 16ರಿಂದ ಚಂಡಮಾರುತದ ಅಬ್ಬರ ಹೆಚ್ಚಾಗಲಿದ್ದು, ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಜೂನ್ 21ರ ವರೆಗೆ ಮಳೆ ತರುತ್ತದೆ. ಅಲ್ಲದೆ ಇದರ ಪ್ರಭಾವ ಜುಲೈ ಹಾಗೂ ಅಕ್ಟೋಬರ್ ವರೆಗೆ ಮುಂದುವರಿಯಲಿದೆ. ಇದೇ ಚಂಡಮಾರುತ ಮಾನ್ಸೂನ್ ಹೊತ್ತು ಬರಲಿದ್ದು, ಹೀಗಾಗಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕೊಡಗು, ಬೆಳಗಾವಿ, ಉಡುಪಿಯಲ್ಲಿ ವರುಣನ ಅಬ್ಬರ ಪ್ರಾರಂಭವಾಗಿದೆ.