ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ವಿರುದ್ಧ ಹೋರಾಟ ಮುಂದುವರೆದಿದ್ದು, ಈಗಾಗಲೇ ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್ಡೌನ್ 3.0 ಮೇ.17ರವರೆಗೆ ಮುಂದುವರಿಯಲಿದೆ. ಇದರ ಮಧ್ಯೆ ಪ್ರಧಾನಿ ಮೋದಿ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಮಹತ್ವದ ವಿಡಿಯೊ ಸಂವಾದ ನಡೆಸುತ್ತಿದ್ದಾರೆ.
ದೇಶದಲ್ಲಿ ಆರ್ಥಿಕ ಸಂಕಷ್ಟ, ವಲಸೆ ಕಾರ್ಮಿಕರ ಸಮಸ್ಯೆ, ಕೊರೊನಾ ಹತೋಟಿಗೆ ತರುವಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು ಸೇರಿದಂತೆ ಲಾಕ್ಡೌನ್ ಮುಂದುವರಿಕೆ ವಿಚಾರವಾಗಿ ಮಾತುಕತೆ ನಡೆಯುತ್ತಿದೆ.
ವಿಡಿಯೊ ಸಂವಾದದ ವೇಳೆ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸಿಎಂಗಳು ಲಾಕ್ಡೌನ್ ಮುಂದೂಡಿಕೆ ಮಾಡಿ ಮತ್ತೊಮ್ಮೆ ಆದೇಶ ಹೊರಡಿಸುವುದು ತುಂಬಾ ಕಷ್ಟ ಎಂದು ಹೇಳಿದ್ದಾಗಿ ತಿಳಿದು ಬಂದಿದೆ. ಈಗಾಗಲೇ ಗುರುತಿಸಲಾಗಿರುವ ಝೋನ್ಗಳಲ್ಲಿ ಮತ್ತಷ್ಟು ಸಡಲಿಕೆ ನೀಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ ಎಂದು ತಿಳಿಸಿವೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ರಾಜ್ಯವನ್ನು ಬೇರೆ ರೀತಿಯಲ್ಲಿ ನೋಡಲಾಗುತ್ತಿದ್ದು, ಕೇಂದ್ರದಿಂದ ಕಡೆಗಣನೆಗೆ ಒಳಪಟ್ಟಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸೇರಿದಂತೆ ಅನೇಕ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ..