ಬೆಂಗಳೂರು: ರಾಜ್ಯದಲ್ಲಿ ಭಾನುವಾರ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, 1,267 ಮಂದಿಗೆ ಹೆಮ್ಮಾರಿ ಸೋಂಕು ತಗುಲಿದೆ. ಇದೀಗ ಈ ಕೊರೊನಾ ಮಹಾಮಾರಿ ಎಫೆಕ್ಟ್‍ನಿಂದಾಗಿ ಬೆಂಗಳೂರು ಪೊಲೀಸರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
ನಗರದಲ್ಲಿ ಪೊಲೀಸರ ಸಂಖ್ಯೆಯೇ ಕಡಿಮೆ ಇರುವ ಪೊಲೀಸರಲ್ಲಿ 130 ಮಂದಿಗೂ ಅಧಿಕ ಸಿಬ್ಬಂದಿಗೆ ಸೋಂಕು ದೃಢವಾಗಿದೆ. ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿದ್ದ 900ಕ್ಕೂ ಹೆಚ್ಚು ಪೊಲೀಸರು ಕ್ವಾರಂಟೈನ್ ಆಗಿದ್ದಾರೆ. ಅಷ್ಟೇ ಅಲ್ಲದೇ 50 ವರ್ಷಕ್ಕೂ ಮೇಲ್ಪಟ್ಟ ಪೊಲೀಸರಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆ ಮಾಡಿದ್ದಾರೆ. ಉಳಿದವರಲ್ಲಿ ಸೋಂಕಿಗೆ ಮೇಲಿಂದ ಮೇಲೆ ಬಲಿಯಾಗುತ್ತಿರುವುದಿಂದ ಭಯಗೊಂಡು ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ ಪೊಲೀಸರ ಸಂಖ್ಯೆಯಲ್ಲಿ ಗಣನಿಯವಾಗಿ ಇಳಿಕೆಯಾಗುತ್ತಿದೆ. ಇದರಿಂದ ಪೊಲೀಸರನ್ನು ಆದಷ್ಟು ಹುರಿದುಂಬಿಸಿ ಕೆಲಸ ಮಾಡಿಸುವ ಪರಿಸ್ಥಿತಿ ಪೊಲೀಸ್ ಇಲಾಖೆಗೆ ಬಂದೊದಗಿದೆ. ಮುಂಜಾಗೃತ ಕ್ರಮದ ಜೊತೆ ಕಂಟೈನ್ಮೆಂಟ್ ಝೋನ್ ಹಾಗೂ ಸೀಲ್‍ಡೌನ್ ಪ್ರದೇಶಗಳಲ್ಲಿ ಕೆಲಸ ಮಾಡುವ ಪೊಲೀಸರಿಗೆ ಪಿಪಿಇ ಕಿಟ್ ಕೊಟ್ಟು ಕೆಲಸ ಮಾಡಿಸುವ ಚಿಂತನೆ ಮಾಡಲಾಗಿದೆ.
ಸೂಕ್ತ ಭದ್ರತೆ ಇರದಿದ್ದರೆ ಮುಂದಿನ ದಿನಗಳಲ್ಲಿ ಯಾರೂ ಕೂಡ ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಮುಂದೆ ಬರುವುದಿಲ್ಲ ಅನ್ನೋದು ಪೊಲೀಸ್ ಇಲಾಖೆಗೆ ಮನವರಿಕೆ ಆಗಿದೆ. ಹೀಗಾಗಿ ಸೂಕ್ತ ಭದ್ರತೆಯೊಂದಿಗೆ ಕರ್ತವ್ಯಕ್ಕೆ ನೇಮಿಸಿ ಕೊರೊನಾ ವಿರುದ್ಧ ಹೋರಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಭಾನುವಾರ ಸಿಲಿಕಾನ್ ಸಿಟಿಯಲ್ಲಿ 783 ಪ್ರಕರಣಗಳು ವರದಿಯಾಗಿವೆ. ಡೆಡ್ಲಿ ವೈರಸ್ ವ್ಯೂಹಕ್ಕೆ ಬೆಂಗಳೂರು ಸಿಲುಕಿರೋದು ಖಚಿತವಾಗಿದೆ. ಇನ್ನೂ ಕಳೆದ ದಿನ 16 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.