ಬೆಳಗಾವಿ: ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಸ್ವಂತ ಪೋಷಕರೇ ಕಳೆದ 10 ವರ್ಷಗಳಿಂದ ಕಾಲಿಗೆ ಬೇಡಿ ಹಾಕಿ ಕಟ್ಟಿ ಹಾಕಿರುವ ಅಮಾನವೀಯ ಘಟನೆ ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.
ವಿಠ್ಠಲ್ ಬಳಗಣ್ಣವರ್ ಎಂಬ ವ್ಯಕ್ತಿಗೆ ಪೋಷಕರೇ ಬೇಡಿ ತೊಡಿಸಿ, ಪಾಳುಬಿದ್ದ ಮನೆಯಲ್ಲಿ ಕೂಡಿ ಹಾಕಿದ್ದಾರೆ. ವಿಠ್ಠಲ್ 10 ವರ್ಷಗಳ ಹಿಂದೆ ಬೆಳಗಾವಿಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದನು. ಬಳಿಕ ಊರಿಗೆ ಬಂದ ಮೇಲೆ ಮಾನಸಿಕ ಅಸ್ವಸ್ಥನಾಗಿದ್ದನು. ಆಸ್ಪತ್ರೆಗೆ ತೋರಿಸಿದರೂ ಗುಣಮುಖನಾಗಿರಲಿಲ್ಲ. ಜನರು ಸಹ ಕಲ್ಲಿನಿಂದ ಹೊಡೆಯುತ್ತಿದ್ದರು. ಆದ ಕಾರಣ ಮನೆಯಲ್ಲಿ ಕೂಡಿ ಹಾಕಿದ್ದೇವೆ ಎಂದು ಪೋಷಕರು ಹೇಳುತ್ತಾರೆ.
ನೇಸರಗಿ ಪಿಎಸ್‌ಐ ವೈ ಎಲ್ ಶೀಗಿಹಳ್ಳಿ ವಿಠ್ಠಲ್ ಬಳಗಣ್ಣವರ್ ಮನೆಗೆ ಭೇಟಿಕೊಟ್ಟು, ಪರಿಶೀಲನೆ ನಡೆಸಿದ್ದಾರೆ. ಜತೆಗೆ ಮಗನ ಸ್ಥಿತಿ ನೆನೆದು ತಾಯಿಯೂ ಸಹ ಕಣ್ಣೀರು ಹಾಕುತ್ತಲೇ ನನ್ನ ಕರುಳ ಬೇರೆಯವರಿಗೆ ತೊಂದರೆಯಾಗದಿರಲಿ ಎಂದು ಕೂಡಿ ಹಾಕಿದ್ದೆವೆ ಎಂದಿದ್ದಾರೆ.
ಹೆತ್ತ ಕರುಳ ಕುಡಿಯ ಕಾಲಿಗೆ ಉದ್ದನೇ ಸರಪಳಿ ಕಾಲಿಗೆ ಕಟ್ಟಿ ಹಾಕಿರುವುದು ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.