ಬೆಳಗಾವಿ: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಹತ್ತು ಹಳ್ಳಿ ಜನರ ಜೀವನಾಡಿಯಾಗಿತ್ತು. ಪ್ರತಿಯೊಂದು ವಸ್ತು ಖರೀದಿಗೂ ಜನರು ಈ ಗ್ರಾಮಕ್ಕೆ ಬರಬೇಕಿತ್ತು. ಆದರೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಇದೀಗ ಊರಿಗೆ ಊರೇ ಸ್ತಬ್ಧವಾಗಿದೆ. ಬಿತ್ತನೆ ಕಾರ್ಯ ಮಾಡಬೇಕಿದ್ದ ರೈತರು ಮನೆ ಸೇರುವಂತಾಗಿದೆ.
ದಡ್ಡಿ ಗ್ರಾಮದಿಂದ ಕೇವಲ ಮೂರು ಕಿ.ಮೀ ಅಂತರದಲ್ಲಿ ಮಹಾರಾಷ್ಟ್ರ ಗಡಿಯಿದೆ. ಕೊರೊನಾ ಆರಂಭದಲ್ಲಿ ಮಹಾರಾಷ್ಟ್ರದ ಪಕ್ಕದಲ್ಲಿದ್ದರೂ ಈ ಗ್ರಾಮದಲ್ಲಿ ಒಂದೇ ಒಂದು ಪ್ರಕರಣ ಪತ್ತೆಯಾಗಿರಲಿಲ್ಲ. ಆದರೆ ಲಾಕ್‍ಡೌನ್ ಸಡಿಲಿಕೆ ನಂತರ ಮುಂಬೈಗೆ ಕೆಲಸಕ್ಕೆ ಹೋಗಿದ್ದ ಒಂದು ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ಗ್ರಾಮಕ್ಕೆ ಆಗಮಿಸಿದ್ದಾರೆ. ಅವರೆಲ್ಲರನ್ನು ಕ್ವಾರಂಟೈನ್ ಮಾಡಿ 14 ದಿನ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆದರೆ ಸರ್ಕಾರದ ಆದೇಶ ಬಂತು ಅನ್ನುವ ಕಾರಣಕ್ಕೆ ಕೊರೊನಾ ರಿಪೋರ್ಟ್ ಬರುವ ಮುನ್ನವೇ ಅವರನ್ನು ರಿಲೀಸ್ ಮಾಡಲಾಗಿತ್ತು.
ಹೀಗೆ ಮನೆಗೆ ಹೋದ ಎಲ್ಲರೂ ಗ್ರಾಮದ ಅಂಗಡಿಗಳಿಗೆ, ಮದುವೆ ಸೇರಿದಂತೆ ಶುಭಸಮಾರಂಭಗಳಲ್ಲಿ ಭಾಗಿಯಾಗಿದ್ದಾರೆ. ರಿಲೀಸ್ ಆದ ಎರಡು ದಿನಕ್ಕೆ ಮನೆಗೆ ಹೋದವರ ಪೈಕಿ 16 ಮಂದಿಗೆ ಕೊರೊನಾ ಬಂದಿತ್ತು. ಪರಿಣಾಮ ಎಲ್ಲರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿ ಇಡೀ ಗ್ರಾಮ ಸೀಲ್‍ಡೌನ್ ಮಾಡಲಾಗಿದೆ. ಜಮೀನುಗಳಿಗೆ ಬಿತ್ತನೆ ಮಾಡಲು ಹೋಗಬೇಕಿದ್ದ ರೈತರು ಇದೀಗ ಲಾಕ್ ಆಗಿದ್ದಾರೆ. ಈ ಬಾರಿಯೂ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕೊರೊನಾ ವರದಿ ಬರುವ ಮುನ್ನವೇ ಬಿಡುಗಡೆ ಮಾಡಿದ್ದಕ್ಕೆ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ದಡ್ಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹತ್ತು ಗ್ರಾಮಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡು ಬಂದಿದ್ದು, ಈ ಎಲ್ಲ ಗ್ರಾಮಗಳಿಗೆ ಜೀವನಾಡಿ ಈ ದಡ್ಡಿ ಗ್ರಾಮವಾಗಿತ್ತು. ಉಪ್ಪಿನಿಂದ ಹಿಡಿದು ಎಲ್ಲಾ ರೀತಿಯ ಸಾಮಗ್ರಿ ಕೊಳ್ಳಲು ಸುತ್ತಮುತ್ತಲ ಗ್ರಾಮಸ್ಥರು ಬರುತ್ತಿದ್ದರು. ಈ ಹತ್ತು ಗ್ರಾಮಗಳಲ್ಲಿ 92 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದಕ್ಕೆ ದಡ್ಡಿ ಗ್ರಾಮದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ. ತರಕಾರಿ ಮಾರುಕಟ್ಟೆ ಸೇರಿದಂತೆ ದಿನಸಿ ಮಾರ್ಕೆಟ್ ಕೂಡ ಬಂದ್ ಮಾಡಲಾಗಿದೆ.
ಮಹಾರಾಷ್ಟ್ರಕ್ಕೆ ಈ ಗ್ರಾಮ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮುಖ್ಯ ರಸ್ತೆಯಲ್ಲಿ ಕಾವಲಿಗಿದ್ದಾರೆ. ಇತ್ತ ಸೀಲ್‍ಡೌನ್ ಆದ ಪ್ರದೇಶದಲ್ಲಿ ಕೂಡ ಪೊಲೀಸರು ರೌಂಡ್ಸ್ ಮಾಡುತ್ತಿದ್ದು, ಯಾರಿಗೂ ಓಡಾಡಲು ಅವಕಾಶ ನೀಡುತ್ತಿಲ್ಲ. ಮೆಡಿಕಲ್ ಶಾಪ್ ಮತ್ತು ರಸಗೊಬ್ಬರ ಅಂಗಡಿಗಳು ಮಾತ್ರ ಓಪನ್ ಇದ್ದು, ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಮಾತ್ರ ದಿನಸಿ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ.