ಬೆಳಗಾವಿ: ಮುಂಬೈನಿಂದ ಬಂದವರನ್ನು ಕ್ವಾರೆಂಟೈನ್‍ನಲ್ಲಿಟ್ಟು ವರದಿಗೂ ಮುನ್ನವೇ ಮನೆಗೆ ಕಳಿಸುತ್ತಾರೆ. ಮನೆಗೆ ಹೋದ ಎರಡೇ ದಿನಕ್ಕೆ ಸೋಂಕಿತರು ಅಂತ ಮತ್ತೆ ಕರೆತಂದು ಆಸ್ಪತ್ರೆಗೆ ದಾಖಲಿಸ್ತಾರೆ.
ಹೌದು. ಬೆಳಗಾವಿಯ ಅತಿವಾಡ ಗ್ರಾಮದಲ್ಲಿ ಎಲ್ಲವೂ ಅತಿಯಾಗಿದೆ ಎನ್ನಿಸುತ್ತಿದೆ. ಮೇ 25ರಂದು ಮುಂಬೈನಿಂದ 48 ಮಂದಿ ವಾಪಸ್ ಬರುತ್ತಾರೆ. ಬಂದವರೆಲ್ಲರನ್ನೂ ಕ್ವಾರಂಟೈನ್ ಮಾಡ್ತಾರೆ. 14 ದಿನಗಳ ಬಳಿಕ ವರದಿ ಬರುವ ಮುನ್ನವೇ ಎಲ್ಲರನ್ನೂ ಮನೆಗೆ ಕಳುಹಿಸ್ತಾರೆ. ಮನೆಗೆ ಹೋದ 48 ಜನರಲ್ಲಿ 14 ಮಂದಿಗೆ ಸೋಂಕು ದೃಢಪಡುತ್ತೆ. ತಕ್ಷಣ 14 ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸ್ತಾರೆ. ಜೊತೆಗೆ 41 ಮಂದಿ ಸಂಪರ್ಕದಲ್ಲಿದ್ರು ಅಂತ ಎಲ್ಲರನ್ನೂ ಕ್ವಾರಂಟೈನ್ ಮಾಡ್ತಾರೆ. ಅದಾದ ಮೂರೇ ದಿನಕ್ಕೆ ನೆಗೆಟಿವ್ ಅಂತ 14 ಜನರಲ್ಲಿ 9 ಮಂದಿಯನ್ನು ವಾಪಸ್ ಮನೆಗೆ ಕಳುಹಿಸ್ತಾರೆ. ಆ 9 ಮಂದಿ ಗ್ರಾಮಕ್ಕೆ ಬಂದಿರೋದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಅತ್ತ ಬೆಳಗಾವಿಯ ಮುತ್ತಗಾ ಗ್ರಾಮದ ಓರ್ವನನ್ನು ಮೂರೇ ದಿನಕ್ಕೆ ಬಿಟ್ಟು ಮನೆಗೆ ಕಳಿಸಿದ್ದರಿಂದ ಬೆಳಗಾವಿಯಲ್ಲಿ ಢವಢವ ಸೃಷ್ಟಿಯಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋದವರಿಗೆ ಕೊರೊನಾ ಇಲ್ಲ ಅಂದ್ಮೇಲೆ ನಮಗೆ ಹೇಗೆ ಕೊರೊನಾ ಬರುತ್ತೆ ಅಂತ ಕ್ವಾರಂಟೈನ್‍ನಲ್ಲಿರೋ 41 ಮಂದಿ ಗರಂ ಆಗಿದ್ದಾರೆ. ನಮಗೆ ಜಮೀನು ಇದೆ, ಮಳೆ ಬರ್ತಿದೆ, ಬಿತ್ತನೆ ಕಾರ್ಯ ಮಾಡಲು ಆಗ್ತಿಲ್ಲ. ಊರಿನವರು ನಮ್ಮನ್ನು ಗ್ರಾಮಕ್ಕೆ ಸೇರಿಸಿಕೊಳ್ತಿಲ್ಲ. ಅಧಿಕಾರಿಗಳ ಎಡವಟ್ಟಿಗೆ ನಮಗೆ ಯಾಕೀ ಶಿಕ್ಷೆ, ಕೂಡಲೇ ನಮ್ಮೆಲ್ಲರನ್ನೂ ಬಿಡಬೇಕು ಅಂತ ಆಗ್ರಹಿಸಿದ್ದಾರೆ.

ಕೊರೊನಾ ವರದಿ ಬರುವ ಮುನ್ನ ಕ್ವಾರೆಂಟೈನ್‍ನಲ್ಲಿದ್ದವರನ್ನ ಬಿಡುಗಡೆ ಮಾಡಿದ್ದು ಒಂದು ಎಡವಟ್ಟಾದರೆ ಇತ್ತ ಕೊರೊನಾ ಪಾಸಿಟಿವ್ ಬಂದಿದೆ ಅಂತ ಕರೆದುಕೊಂಡು ಹೋಗಿ ಮತ್ತೆ ಬಿಟ್ಟು ಹೋಗುವ ಮೂಲಕ ಆರೋಗ್ಯಾಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿದ್ದಾರೆ. ಇಡೀ ಗ್ರಾಮವೇ ಸದ್ಯ ತಲ್ಲಣಗೊಂಡಿದ್ದು ಅಧಿಕಾರಿಗಳು ಮಾತ್ರ ಮೌನ ವಹಿಸಿರೋದು ವಿಪರ್ಯಾಸವೇ ಸರಿ.
Laxmi News 24×7