ಬೆಳಗಾವಿ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ.
ಸಚಿನ್ ಸಾವಂತ್ ಅವರಿಗೆ ಜಾಮೀನು ಸಿಕ್ಕಿರುವ ಹಿನ್ನೆಲೆ ನ್ಯಾಯಾಲಯದ ಆದೇಶ ಪ್ರತಿ ಜೊತೆಗೆ ಸಿಆರ್‌ಪಿಎಫ್ ಅಧಿಕಾರಿಗಳು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಜೈಲು ಅಧಿಕಾರಿಗಳು ನ್ಯಾಯಾಲಯ ಆದೇಶ ಪ್ರತಿ ಪರಿಶೀಲನೆ ನಡೆಸಿ ಸಚಿನ್ ಸಾವಂತ್ ಅವರನ್ನು ಬಿಡುಗಡೆ ಮಾಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸರು ಸಿಆರ್‌ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿ ಬೇಡಿ ತೋಡಿಸಿದ್ದು ಚರ್ಚೆಗೆ ಗ್ರಾಸವಾಗಿತ್ತು. ಏಪ್ರಿಲ್ 23ರಂದು ಈ ಘಟನೆ ನಡೆದಿದ್ದು, ಯೋಧ ಸಚಿನ ಸಾವಂತ್ ಅವರನ್ನು ಪೊಲೀಸ್ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸದಲಗಾ ಪೊಲೀಸ್ ಠಾಣೆಯಲ್ಲಿ ಸಿ.ಆರ್.ಪಿ.ಎಫ್ ಕೋಬ್ರಾ ಕಮಾಂಡೋ ಯೋಧನಿಗೆ ಬೇಡಿ ಹಾಕಿ ಕೂರಿಸಿದ್ದ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ ಮಂಡ್ಯ ಎಂಎಲ್ ಸಿ ಶ್ರೀಕಂಠೇಗೌಡ ಹಾಗೂ ಅವರ ಪಟಾಲಂಗೆ ಬೇಲ್ ಸಿಕ್ಕಿದೆ. ಆದರೆ ದೇಶವನ್ನು ಕಾಪಾಡಿದ ಕೋಬ್ರಾ ಕಮಾಂಡೋ ಇನ್ನು ಜೈಲಿನಲ್ಲೇ ಇದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆ ನಡೆದಿತ್ತು. ಮಾಸ್ಕ್ ಹಾಕಿಲ್ಲವೆಂಬ ಕಾರಣಕ್ಕೆ ಯೋಧನನ್ನು ಅಮಾನವೀಯವಾಗಿ ನಡೆಸಿಕೊಂಡ ಸದಲಗಾ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಪೊಲೀಸರ ಕ್ರಮಕ್ಕೆ ಸಿಆರ್‌ಪಿಎಫ್ ಕೋಬ್ರಾ ಬಟಾಲಿಯನ್ ಅಸಿಸ್ಟೆಂಟ್ ಕಮಾಂಡಂಟ್ ಶ್ಯಾಮ್ ಸುಂದರ್ ಅವರು ಕೂಡ ಕರ್ನಾಟಕ ಡಿಜಿಪಿಗೆ ಟ್ವೀಟ್ ಹಾಗೂ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಘಟನೆ ನಂತರ ಎಫ್‍ಐಆರ್ ದಾಖಲಿಸುವ ಮುನ್ನ ನಮ್ಮ ಗಮನಕ್ಕೂ ತರಬೇಕಿತ್ತು. ಪೊಲೀಸರು ಲಾಟಿಯಿಂದ ಹೊಡೆಯುವಾಗ ಆತ್ಮರಕ್ಷಣೆಗೆ ಪ್ರತಿದಾಳಿ ಮಾಡಿದ್ದಾರೆ. ಆದರೆ ಪೊಲೀಸರು ಯೋಧ ಎಂದು ತಿಳಿದ ಮೇಲೂ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದು ಸರಿಯಲ್ಲ ಎಂದು ಖಾರವಾಗಿ ಪತ್ರ ಬರೆದಿದ್ದರು.
ಪ್ರಕರಣದ ಕುರಿತು ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು, ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಹಾಗೂ ಕೆಲ ಪೊಲೀಸರು ಮಾತ್ರ ಇದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಕೈಗೆ ಬೇಡಿ ಹಾಕಿ ಕೂರಿಸಲಾಗಿದೆ. ಪೊಲೀಸರು ಲಾಕ್‍ಡೌನ್ ಕರ್ತವ್ಯದಲ್ಲಿ ಇರುವುದರಿಂದ ಠಾಣೆಯಲ್ಲಿ ಕಡಿಮೆ ಸಿಬ್ಬಂದಿ ಇರುತ್ತಾರೆ. ಘಟನೆ ನಡೆದ ದಿನ ಯೋಧ ಬಹಳ ಅಕ್ರಮಣಕಾರಿಯಾಗಿದ್ದರಿಂದ ಹಾಗೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.