ಬೆಳಗಾವಿ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಜಟಾಪಟಿ ಶುರುವಾಗಿದೆ. ಬೆಳಗಾವಿಯ ಇಬ್ಬರು ಸಚಿವರಿಂದ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ದೊಡ್ಡ ಮಟ್ಟದಲ್ಲಿ ಲಾಬಿ ನಡೆದಿದ್ದು, ಬೆಳಗಾವಿ ಜಿಲ್ಲೆಯನ್ನು ತಮ್ಮ ಕಂಟ್ರೋಲ್ಗೆ ತೆಗೆದುಕೊಳ್ಳಲು ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಉಮೇಶ್ ಕತ್ತಿಯಿಂದ ದೆಹಲಿ ಮಟ್ಟದಲ್ಲೂ ಲಾಬಿ ನಡೆದಿದೆ.
ಸಚಿವ ಉಮೇಶ್ ಕತ್ತಿ ಯಡಿಯೂರಪ್ಪ ಮಟ್ಟದಲ್ಲಿ ವರ್ಕೌಟ್ ಮಾಡುತ್ತಿದ್ದರೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಒಂದು ಬಾರಿ ಬೆಳಗಾವಿ ಉಸ್ತುವಾರಿ ಅವಕಾಶ ನಮಗೂ ಕೊಡಿ ಅಂತಾ ಶಶಿಕಲಾ ಜೊಲ್ಲೆ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಸಿಎಂಗೆ ಬೆಳಗಾವಿ ಉಸ್ತುವಾರಿ ಹಂಚಿಕೆ ವಿಚಾರ ಮತ್ತೆ ತಲೆನೋವಾಗಿ ಪರಿಣಮಿಸಿದೆ.
ಜಗದೀಶ್ ಶೆಟ್ಟರ್‌ಗೆ ಉಸ್ತುವಾರಿ ನೀಡಲು ಚಿಂತನೆ..
ಒಬ್ಬರಿಗೆ ಕೊಟ್ಟರೆ ಮತ್ತೊಬ್ಬರು ಯಡಿಯೂರಪ್ಪ ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಸರ್ಕಾರ ರಚನೆಯಾದ ಸಂದರ್ಭದಲ್ಲಿ ನೀಡಿದಂತೆ ಹೊರಗಿನ ಜಿಲ್ಲೆಯವರಿಗೆ ಉಸ್ತುವಾರಿ ನೀಡಲು ಸಿಎಂ ಚಿಂತನೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿಗೂ ಮುನ್ನ ಜಗದೀಶ್ ಶೆಟ್ಟರ್‌ಗೆ ಸಿಎಂ ಉಸ್ತುವಾರಿ ನೀಡಿದ್ದರು. ಇದೀಗ ಮತ್ತೆ ಜಗದೀಶ್ ಶೆಟ್ಟರ್‌ಗೆ ಉಸ್ತುವಾರಿ ನೀಡಲು ಚಿಂತನೆ ನಡೆಸಲಾಗಿದೆ.
ಇದಕ್ಕೆ ಬೆಳಗಾವಿ ಜಿಲ್ಲೆಯ ನಾಯಕರು ವಿರೋಧಿಸಿದ್ರೇ ಉಮೇಶ್ ಕತ್ತಿಗೆ ಉಸ್ತುವಾರಿ ನೀಡಲು ಪ್ಲ್ಯಾನ್ ಮಾಡಲಾಗಿದೆ. ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವ ಹಿನ್ನೆಲೆಯಿಂದಾಗಿ ಬೆಳಗಾವಿ ಉಸ್ತುವಾರಿಯನ್ನ ಕತ್ತಿಗೆ ನೀಡಲು ಸಿಎಂ ಪ್ಲ್ಯಾನ್ ಮಾಡಿದ್ದಾರೆ.