ಬಾಗಲಕೋಟೆ: ಕಲಾ ಅಧ್ಯಯನದಿಂದ ಹೇರಳ ಅವಕಾಶಗಳಿವೆ. ವಿಸ್ತೃತ ಅಧ್ಯಯನ ಶೈಲಿಯಿಂದ ಉದ್ಯೋಗವನ್ನು ಅರಿಸುವ ಬದಲು ಆಯ್ಕೆಮಾಡಿಕೊಳ್ಳುವ ಸಾಮರ್ಥ್ಯ ಬೆಳಸಿಕೊಳ್ಳಲು ಸಾಧ್ಯ ಎಂದು ಬಸವೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕೆ.ಎಚ್ ಹೊಸೂರ ಹೇಳಿದರು.
ನಗರದ ಬಸವೇಶ್ವರ ಪದವಿಪೂರ್ವ ಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ , ವಾರ್ಷಿಕ ಸಂಚಿಕೆ ಬಿಡುಗಡೆ, ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಕ್ರೀಡಾ ಸಾಂಸ್ಕೃತಿಕ, ಎನ್.ಸಿ.ಸಿ, ಎನ್.ಎಸ್.ಎಸ್ ರೋವರ್ ರೇಂಜರ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಕಲಾ ವಿಹಾರ ವಾರ್ಷಿಕ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿ ಮಾತನಾಡಿದರು. ನಾವು ಅಧ್ಯಯನ ಮಾಡುವ ವಿಷಯದ ಬಗ್ಗೆ ಹೆಮ್ಮೆ ಇರಬೇಕು. ಉನ್ನತ ಸರಕಾರಿ ಉದ್ಯೋಗಗಳನ್ನು ಆಯ್ದುಕೊಳ್ಳಲು ಕಲಾ ವಿಭಾಗದ ವಿಷಯಗಳ ಅಧ್ಯನ ಅವಶ್ಯವಾಗಿರುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಂಡು ಅಧ್ಯಯನದಲ್ಲಿ ತೊಡಗಿಕೊಳ್ಳಿ. ಸಂಕುಚಿತ ಮನೋಭಾವದಲ್ಲಿ ಅಧ್ಯಯನ ಮಾಡುವುದನ್ನು ಬಿಟ್ಟು ವಿಸ್ತೃತ ವಿಷಯದ ಜ್ಞಾನ ಪಡೆಯಬೇಕು. ಪಠ್ಯಕ್ಕೆ ಮಾತ್ರ ಸೀಮಿತವಾಗದೇ ವಿಸ್ತೃತ ಮತ್ತು ಆಳವಾದ ಅದ್ಯಯನ ಕ್ರಮ ರೂಪಿಸಿಕೊಂಡರೆ ಪರಿಪೂರ್ಣತೆ ಪಡೆದುಕೊಳ್ಳಲು ಸಾಧ್ಯ ಎಂದರು.
ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕೆಂಬ ಅರಿವು ಇರುವ ಪಾಲಕರ ಕಾಲಮಾನದಲ್ಲಿ ನೀವೆಲ್ಲ ಹುಟ್ಟಿರುವುದು ಸೌಭಾಗ್ಯದ ಸಂಗತಿ ಅದನ್ನು ಪರಿಪೂರ್ಣವಾಗಿ ವಿದ್ಯಾರ್ಥಿನಿಯರು ಬಳಸಿಕೊಳ್ಳಿ. ಪ್ರತಿಯೊಂದು ಕೌಶಲ್ಯಕ್ಕೂ ತನ್ನದೇಯಾದ ಪ್ರಾಮುಖ್ಯತೆ ಇದೆ ನಿಮ್ಮಲ್ಲಿರುವ ಆಸಕ್ತಿಯ ಕೌಶಲ್ಯಗಳನ್ನು ಪರಿಪಕ್ವಗೊಳಿಸಿಕೊಳ್ಳಿ. ಉದ್ಯೋಗಗಳನ್ನು ಅರಿಸದೇ ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಪದವಿಪೂರ್ವ ಶಿಕ್ಷಣದಿಂದಲೇ ರೂಪಿಸಿಕೊಳ್ಳಿ. ನಿಮ್ಮ ತಂದೆ ತಾಯಿಯರನ್ನು ಪ್ರೀತಿಸಿ, ಗೌರವಿಸಿ ಅವರ ಶ್ರಮದ ಅರಿವನ್ನು ಗಮನದಲ್ಲಿಟ್ಟುಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಿ. ಬಾಣದಂತೆ ನೀವು ಮುನ್ನುಗ್ಗಲು ಹೆತ್ತವರು ಬಿಲ್ಲಿನಂತೆ ಕಾರ್ಯನಿರ್ವಹಿಸುತ್ತಾರೆ ಅವರ ಕನಸುಗಳನ್ನು ಈಡೇರಿಸುವ ಕೆಲಸ ನಿಮ್ಮದಾಗಬೇಕು. ಕೀಳಿರಿಮೆ ಮನೋಭಾವನೆಗಳನ್ನು ತೊಡೆದುಹಾಕಿ ನಮ್ಮನ್ನು ನಾವು ಒಳ್ಳೆಯವರಾಗಿಸಿಕೊಂಡರೆ ಸಮಾಜ ಒಳ್ಳೆಯದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷ ಸ್ಥಾನ ವಹಿಸಿದ ಪ್ರಾಚಾರ್ಯರಾದ ಎಸ್.ಆರ್ ಮೂಗನೂರಮಠ ಅವರು ಮಾತನಾಡಿ ಶಿಕ್ಷಕರನ್ನು ಗುರುವನ್ನಾಗಿಸುವ ಶ್ರೇಷ್ಠ ಸಂಸ್ಕೃತಿ ಇರುವುದು ಭಾರತದಲ್ಲಿ ಮಾತ್ರ. ಸೂಪ್ತಚೇತನಗಳನ್ನು ಅರ್ಥೈಸಿಕೊಳ್ಳುವ ಮತ್ತು ಅವುಗಳನ್ನು ಬಳಸಿಕೊಳ್ಳುವ ಕೆಲಸ ಮಾಡಿದರೆ ನಮ್ಮನ್ನು ನಾವು ಗುರುತಿಸಿಕೊಳ್ಳಲು ಸಾಧ್ಯ. ಪಾಲಕರ ತ್ಯಾಗದ ಜೀವನವನ್ನು ನೆನಪಿಸಕೊಳ್ಳಬೇಕು. ಆತಂಕಗಳನ್ನು ಪಕ್ಕಕ್ಕಿಟ್ಟು ಸ್ಪರ್ಧಾತ್ಮಕ ಯುಗವನ್ನು ಎದುರಿಸಲು ಸಿದ್ಧರಾಗಬೇಕು.
ಬಸವೇಶ್ವರ ಕಲಾ ಮಹಾವಿದ್ಯಾಲಯದ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳ ಹುಟ್ಟುಹಬ್ಬದ ದಿನ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆ ನೀಡುವ ಕೆಲಸ ಮಾಡುತ್ತಿದ್ದು ಒಂದು ಲಕ್ಷ ರೂಪಾಯಿ ಬೆಲೆಬಾಳುವ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿವೆ ಅವುಗಳ ಸದುಪಯೋಗ ಪಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಮ್ ಗೌಡರ್ ವಾರ್ಷಿಕ ವರದಿ ವಾಚನ ಮಾಡಿದರು. ಪ್ರಾಧ್ಯಾಪಕರುಗಳಾದ ಡಾ.ಆರ್.ಎಮ್ ಬೆಣ್ಣೂರ, ಡಾ. ಆರ್,ಆರ್ ಅರಶಿನಗೋಡಿ, ಎಮ್.ಎಮ್ ದೇವನಾಳ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಚಿನ್ ಕೆಂಚಗೊಂಡರ್, ಪ್ರಿಯಾಂಕಾ ನಾಯಕ ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Laxmi News 24×7