Breaking News

ಬೇರೆ ಯುವಕನ ಜೊತೆ ರೀಲ್ಸ್ ಮಾಡಿದ್ದಕ್ಕೆ ಪ್ರಿಯತಮನೇ ತನ್ನ ಪ್ರೇಯಸಿಯನ್ನು ಕೊಂದು ಸುಟ್ಟುಹಾಕಿದ

Spread the love

ಯಾದಗಿರಿ : ತಾಲೂಕಿನ ಅರಕೇರಾದ ಪಂಚಶೀಲ ನಗರದ ಜಮೀನೊಂದರಲ್ಲಿ ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಕೊಲೆಗೈದು, ಮೃತದೇಹವನ್ನು ಸುಟ್ಟು ಹಾಕಿರುವ ಘಟನೆ (ಏ.3 ರಂದು) ನಡೆದಿತ್ತು.

ಈ ಘಟನೆ ಯಾದಗಿರಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಮೃತ ಯುವತಿ ಅಂತಿಮಾ ವರ್ಮಾ (25) ಎಂದು ಗುರುತಿಸಲಾಗಿದ್ದು, ಬೇರೆ ಯುವಕನೊಂದಿಗೆ ರೀಲ್ಸ್ ಮಾಡಿದ್ದಾಳೆ ಎನ್ನುವ ಕಾರಣಕ್ಕೆ ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಮಾರುತಿಯನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠೀಯಲ್ಲಿ ಮಾಹಿತಿ ನೀಡಿದ ಎಸ್​ಪಿ ಸಿ ಬಿ ವೇದಮೂರ್ತಿ, ಕೊಲೆಯಾದ ಯುವತಿ ಅಂತಿಮಾ ವರ್ಮಾ ಮೂಲತಃ ಉತ್ತರ ಪ್ರದೇಶದವಳಾಗಿದ್ದು, ಕುಟುಂಬ ಸಮೇತ ಮಹಾರಾಷ್ಟ್ರದ ಮುಂಬೈಯಲ್ಲಿ ನೆಲೆಸಿದ್ದರು. ಯುವತಿಯ ಪಕ್ಕದ ಮನೆಯಲ್ಲಿ, ಕೆಲಸಕ್ಕೆಂದು ಮುಂಬೈಗೆ ಬಂದಿದ್ದ ಆರೋಪಿ ಯುವಕನ ಕುಟುಂಬ ನೆಲೆಸಿತ್ತು. ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಹಾಗೂ ಅಂತಿಮಾ ವರ್ಮಾ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಸುಮಾರು ಎರಡು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು.

ಆದರೆ ಅಂತಿಮಾ ವರ್ಮಾ ಬೇರೆ ಬೇರೆ ಸ್ನೇಹಿತರ ಜೊತೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದಳು. ಆದರೆ, ಬೇರೆ ಯುವಕರೊಂದಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಪ್ರೇಮಿಗೆ ಇಷ್ಟ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಅಲ್ಲದೇ ಕೂಡಲೇ ಇಬ್ಬರು ಮದುವೆ ಆಗೋಣಾ ಅಂತ ಒತ್ತಾಯ ಮಾಡಿದ್ದನಂತೆ. ಆಗ ಯುವತಿ ಇನ್ನೂ ಸ್ವಲ್ಪ ಸಮಯ ಕಾಯುವಂತೆ ತಿಳಿಸಿದ್ದಳಂತೆ.

ಇದರಿಂದ ಕೋಪಗೊಂಡ ಯುವಕ ಉಪಾಯ ಮಾಡಿ, ಪ್ರೀತಿಯಿಂದಲೇ ತನ್ನ ಊರಾದ ಯಾದಗಿರಿಗೆ ಕರೆದುಕೊಂಡು ಬಂದಿದ್ದಾನೆ. ಏಪ್ರಿಲ್​ 2ರಂದು ಇಬ್ಬರೂ ಯಾದಗಿರಿಗೆ ಬಂದಿದ್ದಾರೆ. ಬಂದವರು ಇಲ್ಲಿನ ಒಂದು ಲಾಡ್ಜ್​ನಲ್ಲಿ ತಂಗಿದ್ದಾರೆ. ಊರೆಲ್ಲಾ ಸುತ್ತಾಡಿ, ಕೊನೆಗೆ ಜಮೀನೊಂದಕ್ಕೆ ಯುವತಿಯನ್ನು ಕರೆದುಕೊಂಡು ಹೋದ ಯುವಕ, ಯುವತಿಯ ಕತ್ತು ಹಿಸುಕಿ ಸಾಯಿಸಿದ್ದಾನೆ. ನಂತರ ಪೆಟ್ರೋಲ್​ ಸುರಿದು ಮೃತದೇಹದ ಗುರುತು ಸಿಗದಂತೆ ಸುಟ್ಟು ಹಾಕಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ತಲೆಮರೆಸಿಕೊಳ್ಳಲು ಬೇರೆ ಬೇರೆ ಊರುಗಳಿಗೆ ಸಂಚರಿಸಿದ್ದಾನೆ ಎಂದು ಎಸ್​ಪಿ ವೇದಮೂರ್ತಿ ತಿಳಿಸಿದ್ದಾರೆ.

ಜಮೀನಿನಲ್ಲಿ ಸುಟ್ಟ ರೀತಿಯಲ್ಲಿ ಅಪರಿಚಿತ ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ಮೃತದೇಹ ಪತ್ತೆಯಾಗಿರುವ ಕುರಿತು ಸ್ವತಃ ಗುರುಮಠಕಲ್​ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಮೃತದೇಹದ ಗುರುತು ಪತ್ತೆ ಹಚ್ಚುವುದು ಕೂಡ ಪೊಲೀಸರಿಗೆ ಕಷ್ಟವಾಗಿತ್ತು. ತನಿಖೆ ಮುಂದುವರಿಸಲು ಯಾವುದೇ ಸುಳಿವು ಇರಲಿಲ್ಲ. ಇತ್ತ ಕಡೆ ಮುಂಬೈಯಲ್ಲಿ ಯುವತಿ ನಾಪತ್ತೆಯಾಗಿರುವ ಕುರಿತು ಆಕೆಯ ದೊಡ್ಡಪ್ಪ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯಾವುದೇ ಸುಳಿವೂ ಇಲ್ಲದ ಈ ಕೊಲೆ ಪ್ರಕರಣವನ್ನು ನಮ್ಮ ಪೊಲೀಸ್​ ತಂಡ ಅತ್ಯಂತ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸ್​ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಾಡ್ಜ್​ನಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಗಳನ್ನು ಹಾಗೂ ಆಧಾರ್​ ಕಾರ್ಡ್​ ಮಾಹಿತಿಯನ್ನು ಪರಿಶೀಲಿಸಿದಾಗ, ಯುವತಿಯ ಅಣ್ಣನ ಮೊಬೈಲ್​ನಲ್ಲಿದ್ದ ಫೋಟೋದಲ್ಲಿದ್ದ ಬಟ್ಟೆಗೆ ಮ್ಯಾಚ್​ ಆಗಿದೆ. ಆ ಸುಳಿವು ಹಿಡಿದು ಪ್ರಕರಣ ಬೆನ್ನಟ್ಟಿದ್ದ ಪೊಲೀಸರಿಗೆ ಆರೋಪಿಯ ಕೃತ್ಯ ಬಯಲಾಗಿದೆ. ಆರೋಪಿ ಮಾರುತಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣವನ್ನು ಭೇದಿಸಿದ ಪೊಲೀಸ್​ ತಂಡವನ್ನು ಎಸ್​ಪಿ ವೇದಮೂರ್ತಿ ಅವರು ಪ್ರಶಂಸಿಸಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ